ಗದಗ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಬಿಸಿ ಜೊತೆಗೆ ಪಕ್ಷಾಂತರ ಪರ್ವ ಸಹ ಜೋರಾಗಿದೆ. ಬಿಜೆಪಿ ಮುಖಂಡ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಶಾಸಕ ಹೆಚ್.ಕೆ. ಪಾಟೀಲ್ ಅವರೊಂದಿಗೆ ಈಗಾಗಲೇ ಮಾಜಿ ಶಾಸಕ ಶ್ರೀಶೈಲಪ್ಪ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಶ್ರೀಶೈಲಪ್ಪ ಬಿದರೂರ ಹಾಗೂ ಹೆಚ್.ಕೆ. ಪಾಟೀಲ್ ಮಾತನಾಡುತ್ತಿರುವ ಫೋಟೋ ಇದೀಗ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಧಾನಸಭಾ ಚುನಾವಣೆಯಲ್ಲಿ ತಮಗೆ ಬಿಜೆಪಿ ಟಿಕೆಟ್ ನೀಡಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದ ಬಿದರೂರು, ಆಗ ಪ್ರಚಾರದಿಂದ ದೂರ ಉಳಿದಿದ್ದರು. ಈಗಲೂ ಸಹ ಪ್ರಚಾರ ಆರಂಭವಾಗಿದ್ದರೂ ಬಿಜೆಪಿಯ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರಲಿಲ್ಲ. ಇವೆಲ್ಲಕ್ಕೂ ಈಗ ಉತ್ತರ ಸಿಕ್ಕಂತಾಗಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಗದಗ ಹಾಗೂ ರೋಣ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಬಿದರೂರು, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಬೃಹತ್ ಜಾಥಾ ಹಾಗೂ ಸಮಾವೇಶಗಳನ್ನು ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.