ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಆಯ್ಕೆ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು. ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ - ಬಿಜೆಪಿ ಹೆಣಗಾಡಿದ್ದು, ಕೊನೆಗೂ ದಶಕಗಳ ಬಳಿಕ ಬಿಜೆಪಿ ಗದಗ - ಬೆಟಗೇರಿ ನಗರಸಭೆ ಅಧಿಕಾರದ ಗದ್ದುಗೆ ಏರಿತು. ಆದರೆ, ಬಿಜೆಪಿ ಸಂಸದರು ಮಾಡಿದ ಮಹಾ ಯಡವಟ್ಟು ಮತ್ತೆ ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಗದಗ-ಬೆಟಗೇರಿ ನಗರಸಭೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೊಟಿ ಏರ್ಪಟ್ಟಿತ್ತು. 18 ಸದಸ್ಯರ ಬಲ ಹೊಂದಿದ್ದ ಬಿಜೆಪಿ ಓರ್ವ ಸಂಸದರ ಬೆಂಬಲದೊಂದಿಗೆ ಸುಲಭವಾಗಿ ಅಧಿಕಾರದ ಗದ್ದುಗೆ ಏರುವ ಪ್ಲಾನ್ ಮಾಡಿತ್ತು. ಆದರೆ, ಕಾಂಗ್ರೆಸ್ ಇಬ್ಬರು ಪಕ್ಷೇತರ ಬೆಂಬಲದೊಂದಿಗೆ ಓರ್ವ ಶಾಸಕರ ಮತದ ಜೊತೆಗೆ ವಿಧಾನ ಪರಿಷತ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳು ಪ್ಲಾನ್ ಮಾಡಿತ್ತು.
ಇದು ಬಿಜೆಪಿ ಪಕ್ಷಕ್ಕೆ ತೀವ್ರ ತಲೆ ನೋವಾಗಿತ್ತು. ಕೊನೆ ಗಳಿಗೆಯಲ್ಲಿ ವಿಧಾನ ಪರಿಷತ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿಲ್ಲ. ಹಾಗಾಗಿ, ನಗರಸಭೆ ಅಧ್ಯಕ್ಷ, ಉಪಾದ್ಯಕ್ಷ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಉಷಾ ದಾಸರ, ಉಪಾಧ್ಯಕ್ಷ ಸ್ಥಾನಕ್ಕೆ ಸುನಂದಾ ಬಾಕಳೆ ನಾಮಪತ್ರ ಸಲ್ಲಿಸಿದ್ರು. ಕಾಂಗ್ರೆಸ್ ಪರ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಚಂದಾವರಿ, ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಕ್ಕಿ ನಾಮಪತ್ರ ಸಲ್ಲಿಸಿದ್ರು. ಚುನಾವಣೆ ನಡೆದು ಕೊನೆಗೆ ಬಿಜೆಪಿ 19 ಸದಸ್ಯರ ಬಲದೊಂದಿಗೆ ನಗರಸಭೆ ಅಧಿಕಾರದ ಗದ್ದುಗೆ ಏರಿತು. ಆದರೆ, ಬಿಜೆಪಿ ಸಂಸದ ಶಿವಕುಮಾರ ಮಾಡಿದ ಸಹಿ ಎಡವಟ್ಟಿನಿಂದ ಇಡೀ ಚುನಾವಣೆ ಗೊಂದಲದ ಗೂಡಾಗಿತ್ತು.
ಕಾಂಗ್ರೆಸ್ ಅಧ್ಯಕ್ಷ ಅಭ್ಯರ್ಥಿ ಲಕ್ಷ್ಮಣ ಚಂದಾವರಿ ಪರ 19 ಸಹಿ ಆಗಿದೆ. ನನ್ನ ಅಧ್ಯಕ್ಷನಾಗಿ ಘೋಷಣೆ ಮಾಡಿ ಒತಾಯಿಸಿದರು. ಆದರೆ, ಚುನಾವಣೆ ಅಧಿಕಾರಿಯಾದ ಎಸಿ ರಾಯಪ್ಪ ಹುಣಸಗಿ 19 ಜನ ಸದಸ್ಯರು ಬಿಜೆಪಿಯ ಉಷಾ ದಾಸರ ಪರ ಇದ್ದಾರೆ ಅಂತ ಬಿಜೆಪಿ ಸದ್ಯಸ್ಯೆ ಉಷಾ ದಾಸರ ಅಧ್ಯಕ್ಷೆ, ಸುನಂದಾ ಬಾಕಳೆ ಉಪಾಧ್ಯಕ್ಷೆ ಅಂತ ಘೋಷಣೆ ಮಾಡಿದ್ರು. ಇದನ್ನ ಪ್ರಶ್ನಿಸಿ ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಚಂದಾವರಿ ಹಾಗೂ ಸದಸ್ಯರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ರು.
ವಿಚಾರಣೆ ಮಾಡಿದ ಕೋರ್ಟ್ ಫೆಬ್ರುವರಿ 1 ರಂದು ಅಧ್ಯಕ್ಷ, ಉಪಾಧ್ಯಕ್ಷರ ಗೆಜೆಟ್ ನೋಟಿಫಿಕೆಶನ್ಗೆ ತಡೆ ನೀಡಿ ಆದೇಶ ಮಾಡಿದೆ ಎಂದು ಅರ್ಜಿದಾರ ಸದಸ್ಯ ಲಕ್ಷ್ಮಣ ಚಂದಾವರಿ ಹೇಳಿದ್ದಾರೆ.
ಓದಿ: Watch Video: ಬಾಯ್ಫ್ರೆಂಡ್ ರಾಕೇಶ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಶಮಿತಾ ಶೆಟ್ಟಿ
ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಚಂದಾವರಿ ಹೇಳಿಕೆ ಬಿಜೆಪಿ ಪಕ್ಷದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ. ತಡೆಯಾಜ್ಞೆ ಸುದ್ದಿ ಗದಗ - ಬೆಟಗೇರಿ ಅವಳಿ ನಗರದಲ್ಲಿ ಹರಡುತ್ತಿದ್ದಂತೆ ಕೆಲವರು ಅಧ್ಯಕ್ಷರ ಕೊಠಡಿಗೆ ಅಳವಡಿಸಿದ ಅಧ್ಯಕ್ಷೆ ಉಷಾ ದಾಸರ ನಾಮಫಲಕ ತೆಗೆದು ಹಾಕುವಂತೆ ಒತ್ತಾಯಿಸಿದ್ದಾರಂತೆ. ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಎಂಎಲ್ಸಿ ಎಸ್ ವಿ ಸಂಕನೂರ, ಅಧ್ಯಕ್ಷೆ ಉಷಾ ದಾಸರ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ನೂತನ ಸದಸ್ಯರು ನಗರಸಭೆ ಕಚೇರಿಗೆ ದೌಡಾಯಿಸಿ, ನಗರಸಭೆ ಆಯುಕ್ತ ಗುರುಪ್ರಸಾದ ಜೊತೆ ಚರ್ಚೆ ಮಾಡಿದ್ದಾರೆ. ನಾಮಫಲಕ ತೆಗೆಯುವಂತೆ ಯಾರೂ ಒತ್ತಡ ಹಾಕಿಲ್ಲ ಅಂತ ಆಯುಕ್ತರು ಹೇಳಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದ ಜನರು ಬಿಜೆಪಿಗೆ ಬಹುಮತ ನೀಡಿ ಅಧಿಕಾರ ನೀಡಿದ್ದಾರೆ. ಆದರೆ, ಕಾಂಗ್ರೆಸ್ ವಾಮಮಾರ್ಗದಿಂದ ಅಧಿಕಾರ ಹಿಡಿಯುವ ಕುತಂತ್ರ ನಡೆಸಿದೆ ಅಂತ ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ. ತಡೆಯಾಜ್ಞೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಹೈಕೋರ್ಟ್ ನಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಅಂತ ಬಿಜೆಪಿ ವಿಧಾನ ಪರಿಷತ ಸದಸ್ಯ ಎಸ್ ವಿ ಸಂಕನೂರ ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ