ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ಸೌಹಾರ್ದತೆ ಸಂದೇಶ ಸಾರೋ ಗದಗ ನಗರದ ಶ್ರೀ ಜಗದ್ಗುರು ತೋಂಟದಾರ್ಯ ಮಠಕ್ಕೂ ಮುಸ್ಲಿ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಬೇಕೆಂಬ ಕೂಗು ಕೇಳಿ ಬಂದಿದೆ. ಏಪ್ರಿಲ್ 16 ರಿಂದ ತೋಂಟದಾರ್ಯ ಮಠದ ಅದ್ಧೂರಿ ಜಾತ್ರೆ ನಡೆಯಲಿದ್ದು, ಈಗಾಗಲೇ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಆದರೆ, ಅನ್ಯಧರ್ಮದ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ.
ಹಿಂದೂ ಪರ ಸಂಘಟನೆಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚಳವಳಿ ಶುರುಮಾಡಿದ್ದು, ಭಾವೈಕ್ಯ ಸಂದೇಶ ಸಾರಿದ ಮಠಕ್ಕೆ ಈಗ ಈ ಚಳುವಳಿ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಯಾವುದೇ ಕಾರಣಕ್ಕೂ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಶ್ರೀರಾಮಸೇನೆ ಒತ್ತಾಯಿಸಿದ್ದು, ಮುದ್ರಣ ಕಾಸಿಯಲ್ಲಿ ಧರ್ಮಯುದ್ಧ ಶುರುವಾಗಿದೆ.
ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಜಾತ್ರೆ ನಡೆದಿಲ್ಲ. ಹೀಗಾಗಿ ಈ ವರ್ಷ ಅದ್ಧೂರಿ ಜಾತ್ರೆಗೆ ತೋಂಟದಾರ್ಯ ಮಠ ನಿರ್ಧಾರ ಮಾಡಿದೆ. ಸುಮಾರು ಒಂದು ತಿಂಗಳ ನಡೆಯುವ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತೆ. ರಾಜ್ಯ ಮಾತ್ರವಲ್ಲ ಹೊರರಾಜ್ಯದ ನೂರಾರು ವ್ಯಾಪಾರಸ್ಥರು ಇಲ್ಲಿಗೆ ಆಗಮಿಸುತ್ತಾರೆ. ಮಕ್ಕಳ ಆಟದ ವಸ್ತುಗಳು, ಅಲಂಕಾರ ವಸ್ತುಗಳು, ಬಟ್ಟೆ ಸೇರಿದಂತೆ ಎಲ್ಲ ರೀತಿಯ ವ್ಯಾಪಾರ ಇಲ್ಲಿ ನಡೆಯುತ್ತೆ.
ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗ್ತಾರೆ. ಆದ್ರೆ, ಈ ವರ್ಷದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾಸ್ಥರಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದೂ ಅಂತ ಶ್ರೀರಾಮಸೇನೆ ಒತ್ತಾಯಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತೋಂಟದಾರ್ಯ ಜಾತ್ರಾ ಕಮಿಟಿಗೆ ಒತ್ತಾಯಿಸಿದೆ. ಅಷ್ಟೇ ಅಲ್ಲ ತೋಂಟದಾರ್ಯ ಮಠದ ಪ್ರಭಾವಿ ಭಕ್ತ ಮುಖಂಡರಿಗೂ ಈ ಬಗ್ಗೆ ಮನವಿ ಮಾಡುತ್ತೇವೆ ಅಂತ ಶ್ರೀರಾಮಸೇನೆ ಹೇಳಿದೆ.
ಮುಸ್ಲಿಂ ವ್ಯಕ್ತಿಗೆ ವ್ಯಾಪಾರದ ಟೆಂಡರ್ ಇಲ್ಲ: ಹಿಜಾಬ್ ವಿಚಾರದ ಹೈಕೋರ್ಟ್ ತೀರ್ಪು ಪಾಲಿಸದ ಕಾರಣ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಬೇಡ ಅಂತ ಶ್ರೀರಾಮಸೇನೆ ಹೇಳಿದೆ. ಶ್ರೀರಾಮಸೇನೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಜಾತ್ರೆಯ ವ್ಯಾಪಾರ ವಹಿವಾಟಿನ ಟೆಂಡರ್ ಮುಸ್ಲಿಂ ಸಮುದಾಯದವರೇ ಪಡೆಯುತ್ತಿದ್ರು. ಆದ್ರೆ, ಈ ವರ್ಷ ಶಿರಸಿ ಮೂಲದ ವ್ಯಕ್ತಿಗೆ ತೋಂಟದಾರ್ಯ ಮಠ ಟೆಂಡರ್ ನೀಡಿದೆ.
ಈ ಬಗ್ಗೆ ಮಠದ ಶ್ರೀಗಳು, ಜಾತ್ರಾ ಕಮಿಟಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಸಹಬಾಳ್ವೆ, ಭಾವೈಕ್ಯತೆ ನಮ್ಮ ಮಠದ ತತ್ವ. ಆದರೆ, ಸಮಾಜಿಕ ಜಾಲತಾಣದ ಚಳವಳಿ ಬಗ್ಗೆ ಮಾತನಾಡಲ್ಲ ಅಂತ ಶ್ರೀಗಳು ಹೇಳಿದ್ದಾರೆ. ಆದ್ರೆ, ಶ್ರೀರಾಮಸೇನೆ ಮಾತ್ರ ಇದಕ್ಕೆ ಅವಕಾಶ ಕೊಡಲ್ಲ ಅಂತಿದೆ. ಜಾತ್ರೆಗೂ ಮುನ್ನ ಕರಪತ್ರದ ಮೂಲಕ ಗದಗ-ಬೆಟಗೇರಿ ಅವಳಿ ನಗರದ ಮನೆ ಮನೆಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸಲು ಶ್ರೀರಾಮಸೇನೆ ಮುಂದಾಗಿದೆ.
ಶ್ರೀರಾಮಸೇನೆ ಸೇರಿ ಹಿಂದೂ ಪರ ಸಂಘಟನೆಗಳ ಮುಖಂಡರು ಮುಸ್ಲಿಂ ವ್ಯಾಪಾರಸ್ಥರಿಗೆ ಜಾತ್ರೆಯಲ್ಲಿ ಅವಕಾಶ ನೀಡಬಾರದು ಅಂತ ಮನವಿ ನೀಡಲು ನಿರ್ಧಾರ ಮಾಡಿದ್ದಾರೆ. ಕೋವಿಡ್ ಬಳಿಕ ನಡೆಯಲಿರೋ ತೋಂಟದಾರ್ಯ ಜಾತ್ರೆಗೆ ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ, ಈಗ ಧರ್ಮಯುದ್ಧ ಶುರುವಾಗಿದ್ದು, ಯಾವ ಹಂತಕ್ಕೆ ತಲುಪುತ್ತೋ ಅನ್ನೋದು ಕಾದು ನೋಡಬೇಕಿದೆ.
ಇದನ್ನೂ ಓದಿ: ಚಾಮರಾಜನಗರದ ಗೋಪಾಲಸ್ವಾಮಿ ಜಾತ್ರೆಗೂ ಕಾಲಿಟ್ಟ ವ್ಯಾಪಾರ ನಿರ್ಬಂಧ ವಿವಾದ