ಗದಗ: ಜಿಲ್ಲೆಯಲ್ಲಿ ಸುಮಾರು ಮೂರು ನಾಲ್ಕು ವರ್ಷಗಳಿಂದ ಹದಗೆಟ್ಟ ರಸ್ತೆಗಳಲ್ಲಿ ಜೀವ ಪಣಕ್ಕಿಟ್ಟು ಸಂಚಾರ ಮಾಡುವಂತ ಪರಿಸ್ಥಿತಿ ಇದೆ. ಇಡೀ ಗದಗ ನಗರದ ರಸ್ತೆಗಳು, ಗದಗದಿಂದ ರೋಣ ತಾಲೂಕು ಸಂಪರ್ಕ ರಸ್ತೆ, ಗಜೇಂದ್ರಗಡ ತಾಲೂಕು ಸಂಪರ್ಕ ರಸ್ತೆ, ಮುಂಡರಗಿ ತಾಲೂಕು ಸಂಪರ್ಕ ರಸ್ತೆ ಮತ್ತು ಲಕ್ಷ್ಮೇಶ್ವರ ತಾಲೂಕು ಸಂಪರ್ಕದ ಎಲ್ಲಾ ಮುಖ್ಯ ಹೆದ್ದಾರಿಗಳು ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ.
ಇದೇ ರಸ್ತೆಗಳಲ್ಲಿ ಸಾಕಷ್ಟು ಸಾವು ನೋವುಗಳಾಗಿವೆ. ಇದರಿಂದ ಆಟೋ ಚಾಲಕರ ಸಂಘದ ವತಿಯಿಂದ ಇಂದು ಡಾ. ಪಂಡಿತ ಪುಟ್ಟರಾಜ ಗವಾಯಿಗಳ ವೃತ್ತದ ಬಳಿ ಧರಣಿ ನಡೆಸಿ ಜನಪ್ರತಿನಿಧಿಗಳು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುರಕ್ಷಿತವಾಗಿ ಓಡಾಡೋದಕ್ಕೆ ರಸ್ತೆ ಮಾಡಿಲ್ಲ ಅಂದರೇ, ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ಕಡೆ ರಸ್ತೆ ಸಮಸ್ಯೆಯಾದ್ರೆ ಇನ್ನೊಂದೆಡೆ ನಗರದ ಮಧ್ಯ ಭಾಗದಲ್ಲಿ ಮೂರು ವರ್ಷಗಳಿಂದ ನಿರ್ಮಾಣವಾದ ಬಸ್ ನಿಲ್ದಾಣ ಇನ್ನೂ ಉದ್ಘಾಟನೆಯಾಗದೇ ನಿರುಪಯುಕ್ತವಾಗಿ ಉಳಿದಿದೆ. ಅದರಲ್ಲೂ ಪ್ರಮುಖವಾಗಿ ರಾಜಕೀಯ ಕೆಸರೆರಚಾಟದಲ್ಲಿ ಬಸ್ ನಿಲ್ದಾಣ ಉದ್ಘಾಟನೆಯಾಗದೆ ಸಾವಿರಾರು ಪ್ರಯಾಣಿಕರಿಗೆ ತೊಂದರೆ ಮಾಡ್ತಿದ್ದಾರೆ. ಸಚಿವ ಸಿ.ಸಿ. ಪಾಟೀಲ್ ಮತ್ತು ಶಾಸಕ ಹೆಚ್.ಕೆ.ಪಾಟೀಲ್ ತಮ್ಮ ರಾಜಕೀಯ ಪ್ರತಿಷ್ಠೆಗಾಗಿ ಬಸ್ ನಿಲ್ದಾಣ ಉದ್ಘಾಟನೆ ಮಾಡದೆ ಇರೋದ್ರಿಂದ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ನೂರಾರು ವ್ಯಾಪರಸ್ಥರಿಗೆ ಹೊಡೆತ ಬಿದ್ದಿದೆ. ಇನ್ನೊಂದೆಡೆಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡ್ತಿದ್ದಾರೆ.
ಗದಗ ಹೊರವಲಯದಲ್ಲಿರುವ ಸುಮಾರು ಎರಡು ಮೂರು ಕಿಮೀ ದೂರದಲ್ಲಿ ಇರುವ ಹೊಸ ಬಸ್ ನಿಲ್ದಾಣದಿಂದ ಗದಗ ನಗರಕ್ಕೆ ಎಂಟ್ರಿ ಕೊಡ ಬೇಕಾದರೆ ಸುಮಾರು 100 ರೂ. ಆಟೋ ಚಾರ್ಜ್ ಕೊಟ್ಟು ಬರಬೇಕು. ಅದರಲ್ಲೂ ವಿದ್ಯಾರ್ಥಿಗಳಿಗೆ, ಗ್ರಾಹಕರಿಗೆ ಸಾರ್ವಜನಿಕರಿಗೆ ಮಾರ್ಕೆಟ್ಗೆ ಬಂದು ಹೋಗಬೇಕಾದರೆ ದುಬಾರಿ ಬೆಲೆ ಕೊಟ್ಟು ಹೈರಾಣಾಗಿದ್ದಾರೆ. ಇನ್ನೊಂದೆಡೆ ಪುಟ್ಟರಾಜ ಗವಾಯಿಗಳ ಹೆಸರಿಡಬೇಕೆಂದು ಹಲವು ಸಂಘಟನೆಗಳು ಹೋರಾಟ ಮಾಡುತ್ತಾ ಬರ್ತಿವೆ. ಆದರೂ ಸಹ ಈ ಇಬ್ಬರು ನಾಯಕರಿಗೆ ಈ ಸಾರ್ವಜನಿಕರ ಕೂಗು ಮಾತ್ರ ಕೇಳುತ್ತಿಲ್ಲ.