ಗದಗ: ಸೂಕ್ತ ಚಿಕಿತ್ಸೆ ನೀಡದ ಹಿನ್ನೆಲೆ ವ್ಯಕ್ತಿ ಮೃತಪಟ್ಟನೆಂದು ಆರೋಪಿಸಿ ಕೊರೊನಾ ವಾರಿಯರ್ಸ್ ಮೇಲೆ ಗುಂಪೊಂದು ಹಲ್ಲೆ ಮಾಡಿದೆ. ಇದರಿಂದ ಕೆಲ ಹೊತ್ತು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಹೀಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋ ಹಾಸಿಗೆ.. ಕೈಗೆ ಸಿಕ್ಕ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡ್ತಿರೋ ಮೃತರ ಸಂಬಂಧಿಗಳು... ನಮಗ ರಕ್ಷಣೆ ಬೇಕು ಎಂದು ಆಗ್ರಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ. ಇವೆಲ್ಲಾ ದೃಶ್ಯಗಳು ಕಂಡು ಬಂದದ್ದು ಗದಗದ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ.
ಕೊರೊನಾ ಲಕ್ಷಣಗಳಿದ್ದ ಗದಗ ತಾಲೂಕಿನ ಚಿಂಚಲಿ ಗ್ರಾಮದ ವ್ಯಕ್ತಿ ದೊಡ್ಡ ಹನುಮಂತಪ್ಪ ಪೂಜಾರ್(78) ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಒಂದು ಗಂಟೆಯ ನಂತರ ಅವರು ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಮೃತನ ಸಂಬಂಧಿಗಳು, ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿ ಅಲ್ಲಿದ್ದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೃತ ವ್ಯಕ್ತಿ ಇದ್ದ ಮಂಚ ಹಾಗೂ ಹಾಸಿಗೆಯನ್ನು ಹೊರ ತಂದು ಎಸೆದಿದ್ದಾರೆ. ವೈದ್ಯಕೀಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಮೃತ ವ್ಯಕ್ತಿ ದೊಡ್ಡ ಹನುಮಂತಪ್ಪ, ಗದಗ ಜಿಪಂ ಸದಸ್ಯ ಹನುಮಂತಪ್ಪ ಪೂಜಾರ್ ಅವರ ಸಂಬಂಧಿಕನಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ವೈದ್ಯರನ್ನು ಕೇಳಿದ್ರೆ, ಅವರಿಗೆ ಸಾರಿ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 3.30ರ ವೇಳೆಗೆ ಕೋವಿಡ್ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿರವಿಲ್ಲದ ಕಾರಣ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅವರ ಸ್ವ್ಯಾಬ್ ವರದಿಯೂ ಸಹ ಬರಬೇಕಿದೆ. ಅಷ್ಟರಲ್ಲಿ ಈ ಘಟನೆ ನಡೆದಿದ್ದು, 10 ಜನ ಸಿಬ್ಬಂದಿ ಮೇಲೆ ಮೃತನ ಸಂಬಂಧಿಕರು ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಈಗಾಗಲೇ ದೂರು ನೀಡಿದ್ದೇವೆ ಎಂದಿದ್ದಾರೆ.
ಇನ್ನು ಈ ಘಟನೆಯಿಂದ ವಿಚಲಿತರಾಗಿರೋ ಕಿರಿಯ ವೈದ್ಯರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ನಂತರ ಅವರಿಗೆ ಹಿರಿಯ ವೈದ್ಯರು ತಿಳಿ ಹೇಳಿ ವಾಪಸ್ ಕರ್ತವ್ಯಕ್ಕೆ ಮರಳುವಂತೆ ಮನವೊಲಿಸಿದ್ದಾರೆ.