ಗದಗ: ನಮಗೆ ಹಂಚಿಕೆಯಾಗಿರೋ ಮನೆಗಳನ್ನು ನಮಗೆ ನೀಡಿ ಅಂತ ಕೇಳಿದ್ದಕ್ಕೆ ಸವರ್ಣೀಯರು ದಲಿತರ ಮೇಲೆ ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಪ್ರವಾಹ ಪೀಡಿತ ಬಿ.ಎಸ್ ಬೇಲೇರಿ ನವಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಬಿ.ಎಸ್ ಬೇಲೇರಿ ಗ್ರಾಮ ಮತ್ತೆ ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾದ ಪರಿಣಾಮ ಇಡೀ ಗ್ರಾಮದಲ್ಲಿನ ಜನ್ರು ನವಗ್ರಾಮಕ್ಕೆ ಶಿಫ್ಟ್ ಆಗೋ ನಿರ್ಧಾರ ಮಾಡಿದ್ದಾರೆ. ಗ್ರಾಮದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಈ ಮನೆಗಳಲ್ಲಿ ಕಳೆದ 10 ವರ್ಷಗಳಿಂದ ವಾಸ ಮಾಡ್ತಿದ್ದು, ಏಕಾಏಕಿ ಮನೆ ಬಿಡಿ ಎಂದ್ರೆ ಎಲ್ಲಿಗೋಗೋದು ಅಂತ ದಲಿತರು ಹೇಳಿದ್ದಾರೆ. ಈ ಮಾತುಗಳು ಇಬ್ಬರ ನಡುವೆ ವಾದ ವಿವಾದಕ್ಕೆ ಕಾರಣವಾಗಿ ಗಲಾಟೆಯಾಗಿದೆ. ಎರಡೂ ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
2009ರಲ್ಲಿ ಪ್ರವಾಹ ಬಂದು ಗ್ರಾಮದ ಜನ್ರು ತಮ್ಮ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ರು. ಸರ್ಕಾರ ಈ ಗ್ರಾಮವನ್ನು ಅಂದು ಸ್ಥಳಾಂತರಿಸಿ ನವಗ್ರಾಮ ನಿರ್ಮಾಣ ಮಾಡಿತ್ತು. ಆಗ ಬಹುತೇಕರು ಮೂಲ ಗ್ರಾಮ ತೊರೆದು ನವಗ್ರಾಮಕ್ಕೆ ಬರುವಲ್ಲಿ ಹಿಂದೇಟು ಹಾಕಿದ್ರು. ಆದರೆ ಗ್ರಾಮದ 42 ದಲಿತ ಕುಟುಂಬಗಳ ಪೈಕಿ 35ಕ್ಕೂ ಹೆಚ್ಚು ಕುಟುಂಬಗಳು ಮೂಲ ಗ್ರಾಮದಲ್ಲಿ ತಮ್ಮ ಮನೆಗಳು ಸಂಪೂರ್ಣ ಕುಸಿದಿದ್ದರಿಂದ ನವಗ್ರಾಮದ ಆಸರೆ ಮನೆಗಳಲ್ಲಿ ವಾಸಿಸೋಕೆ ಆರಂಭಿಸಿದ್ರು. ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಹಂಚಿಕೆ ಮಾಡಿದ ಮನೆಗಳಲ್ಲಿ ವಾಸಿಸಲು ತೆರಳಿದ ದಲಿತ ಕುಟುಂಬಗಳಿಗೆ, ಗ್ರಾಮದ ಹಿರಿಯರು ಸಭೆ ನಡೆಸಿ ನೀವೆಲ್ಲಾ ಇಲಾಖೆ ಹಂಚಿಕೆ ಮಾಡಿದ ಪ್ರಕಾರ ಮನೆಗಳಿಗೆ ತೆರಳುವುದು ಬೇಡ. ನವಗ್ರಾಮದಲ್ಲಿ ಒಂದೆಡೆ ನೆಲೆಸೋಕೆ ನಾವೆಲ್ಲಾ ವ್ಯವಸ್ಥೆ ಮಾಡ್ತೀವಿ ಅಂತೇಳಿದ್ರು. ಅದರಂತೆ ದಲಿತ ಕುಟುಂಬಗಳು ಹತ್ತು ವರ್ಷಗಳಿಂದ ಒಂದೇ ಕಡೆ ವಾಸವಾಗಿದ್ದರು.