ಗದಗ : ತಮ್ಮ ಹಿಂಡಿನಲ್ಲಿನ ಹಿರಿಯ ಹಸುವೊಂದು ಅನಾರೋಗ್ಯದಿಂದ ಮೃತಪಟ್ಟರೆ ಅದರ ಮಕ್ಕಳು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಕಣ್ಣೀರು ಹಾಕಿದ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದ ಸಿದ್ದೇಶ್ವರ ಪಂಚ ಗೃಹ ಹಿರೇಮಠದಲ್ಲಿ ನಡೆದಿದೆ.
ನಿನ್ನೆ ಅನಾರೋಗ್ಯದಿಂದ ಮಠದ ಗೋಶಾಲೆಯ ಹಿರಿಯ ಹಸು ಗೌರಿ ಸಾವನ್ನಪ್ಪಿತ್ತು. ಮಠದ ಸ್ವಾಮೀಜಿಗಳು ಮತ್ತು ಊರಿನ ಪ್ರಮುಖರು ಸೇರಿ ಹಿಂದೂ ಸಂಪ್ರದಾಯದಂತೆ ಪೂಜ್ಯ ಭಾವನೆಯಿಂದ ಕಾಣುವ ಮೃತ ಗೌರಿಯನ್ನು ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಈ ವೇಳೆ, ಅದರ ಮಕ್ಕಳು ಮತ್ತು ಇತರ ಹಸುಗಳು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಎಲ್ಲರಿಗೂ ಹುಬ್ಬೇರಿಸುವಂತೆ ಮಾಡಿದೆ.
ಹತ್ತಾರು ಹಸುಗಳು ಬಂದು ಅಂತ್ಯಸಂಸ್ಕಾರ ಮುಗಿಯುವವರೆಗೂ ಸ್ಥಳದಲ್ಲೇ ಇದ್ದು ವೀಕ್ಷಣೆ ಮಾಡಿ ತಾಯಿ ಗೌರಿಗೆ ಅಂತಿಮ ನಮನ ಸಲ್ಲಿಸಿವೆ. ಗೋಶಾಲೆ ನಿರ್ಮಾಣವಾದಾಗ ಮೊದಲು ಬಂದಿದ್ದ ಹಿರಿಯ ಹಸು ಗೌರಿ, ಹತ್ತಕ್ಕೂ ಹೆಚ್ಚು ಕರುಗಳಿಗೆ ಜನ್ಮ ನೀಡಿತ್ತು.
ಕಾಕತಾಳೀಯ ಎಂಬಂತೆ ಸಾವನ್ನಪ್ಪಿದ ಹಸುವಿಗೆ ಇತರ ಹಸುಗಳು ಬಂದು ಸಂತಾಪ ಸೂಚಿಸಿವೆ. ಹಸುಗಳ ಈ ನಡೆ ಕಂಡು ಅಚ್ಚರಿಗೊಳಗಾದ ಮಠದ ಸ್ವಾಮೀಜಿ ಹಾಗೂ ಸ್ಥಳೀಯರು ಮೂಕವಿಸ್ಮಿತರಾಗಿದ್ದಾರೆ.