ಗದಗ: ವೈದ್ಯರ ನಿರ್ಲಕ್ಷ್ಯಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಗೆ ಸೂಕ್ತ ಚಿಕಿತ್ಸೆ ಸಿಗದ್ದಕ್ಕೆ ಜಿಮ್ಸ್ ಆಸ್ಪತ್ರೆಗೆ ಸಾಗಿಸಿರೋ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಸರ್ವೆ ಇಲಾಖೆಯ ಮಹಿಳಾ ಸಿಬ್ಬಂದಿವೋರ್ವರು, ವೈಯಕ್ತಿಕ ಕಾರಣಗಳಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು. ಬಳಿಕ ಅವರನ್ನು ರೋಣ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು. ಬೆಳಗ್ಗೆಯೇ ಆಸ್ಪತ್ರೆಗೆ ಆಗಮಿಸಬೇಕಾಗಿದ್ದ ವೈದ್ಯೆ ಡಾ. ಶಾಹಿನಾ, ಮಧ್ಯಾಹ್ನ 12 ಗಂಟೆಯಾದ್ರೂ ಆಸ್ಪತ್ರೆಗೆ ಬಂದಿರಲಿಲ್ಲ. ಅನಿವಾರ್ಯವಾಗಿ ಯುವತಿಯ ಸಂಬಂಧಿಕರು ಆಕೆಯನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ರು.
ಈ ವೇಳೆ ಆಸ್ಪತ್ರೆಗೆ ಆಗಮಿಸಿದ ವೈದ್ಯೆ ಶಾಹಿನಾ ಮಹಿಳೆಯನ್ನು ನೋಡಿದರೂ, ಸೌಜನ್ಯಕ್ಕಾದರೂ ಚಿಕಿತ್ಸೆ ನೀಡೋ ಕೆಲಸ ಮಾಡಲಿಲ್ಲ ಎಂದು ಸಂಬಂಧಿಕರು ಮತ್ತು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರತಿದಿನವೂ ವೈದ್ಯರು ಕೆಲಸಕ್ಕೆ ತಡವಾಗಿ ಆಗಮಿಸ್ತಾರೆ ಅನ್ನೋ ಆರೋಪಗಳು ಕೇಳಿಬಂದಿವೆ. ಕೂಡಲೇ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.