ಗದಗ: ವೆಂಟಿಲೇಟರ್ ಬದಲಾಯಿಸುವ ವೇಳೆ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಹಿಳೆ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
ಮಹಿಳೆಯ ಸಂಬಂಧಿಕರ ಆರೋಪವೇನು?
ನಗರದ ಅಂಬೇಡ್ಕರ್ ಬಡವಾಣೆಯ ನಿವಾಸಿ 52 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಕೋವಿಡ್ ರೋಗಿಯಾಗಿದ್ದ ಇವರು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆ ಸಿಬ್ಬಂದಿ ವೆಂಟಿಲೇಟರ್ ಬದಲಾಯಿಸುವ ವೇಳೆ ನಿರ್ಲಕ್ಷ್ಯ ತೋರಿದ್ದರಿಂದ ಮಹಿಳೆ ಮೃತಪಟ್ಟಿದ್ದಾರೆ. ವೆಂಟಿಲೇಟರ್ ಬದಲಾಯಿಸುವಾಗ ಕೊನೆಪಕ್ಷ ಆಕ್ಸಿಜನ್ ಅಳವಡಿಸಿ ಎಂದು ಗೋಗರೆದರೂ ಆಸ್ಪತ್ರೆ ಸಿಬ್ಬಂದಿ ಕೇಳಲಿಲ್ಲ. ನಮಗೆ ಆವಾಜ್ ಹಾಕಿ ಬಾಯಿ ಮುಚ್ಚಿಸಿದರು. ವೆಂಟಿಲೇಟರ್ ತೆಗೆದ 10 ನಿಮಿಷದಲ್ಲಿ ಮಹಿಳೆ ನರಳಿ ನರಳಿ ಕೊನೆಯುಸಿರೆಳೆದಿದ್ದಾರೆ ಎಂದು ಮೃತಳ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ಮೃತ ಮಹಿಳೆ ಒಂದು ವಾರದಿಂದ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ತೊಂದರೆ ಇದ್ದಿದರಿಂದ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ (ಬುಧವಾರ) ಮುಂಜಾನೆ 4.30 ರ ಸುಮಾರಿಗೆ ಬಂದ ವೈದ್ಯರು ಬೇಜವ್ದಾರಿಯಿಂದ ವೆಂಟಿಲೇಟರ್ ಬದಲಾಯಿಸಿ ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸೋಂಕಿನಿಂದ ಮೃತಪಟ್ಟ ತಾಯಿ-ಮಗನ ಶವ ಕೊಡಲು ಖಾಸಗಿ ಆಸ್ಪತ್ರೆಯಿಂದ 10 ಲಕ್ಷ ರೂ. ಬಿಲ್!?
ಕರೆ ಸ್ವೀಕರಿಸದ ಜಿಮ್ಸ್ ನಿರ್ದೇಶಕರು:
ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಜಿಮ್ಸ್ ನಿರ್ದೇಶಕ ಪಿ.ಎಸ್. ಭೂಸರೆಡ್ಡಿಯವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ. ಘಟನೆ ನಡೆದ ಬಳಿಕ ಜಿಮ್ಸ್ಗೆ ಭೇಟಿ ನೀಡಿದ ಶಾಸಕ ಹೆಚ್.ಕೆ ಪಾಟೀಲ್, ವೈದ್ಯರು ಈ ರೀತಿ ಸಾವು ನೋವು ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕಠಿಣ ಕ್ರಮಕ್ಕೆ ಒತ್ತಾಯ:
ತನ್ನ ಕಣ್ಣ ಮುಂದೆಯೇ ಅಕ್ಕನ ಜೀವ ಹೋಗಿರುವುದನ್ನು ಕಂಡ ಮೃತಳ ಸಹೋದರಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಜಿಮ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು ಕ್ರಮಕ್ಕೆ ಒತ್ತಾಯಿಸಿದ್ದಾರೆ.