ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216 ರಲ್ಲಿ ಮತದಾನಕ್ಕೆ ಬಂದ ಮಹಿಳೆಗೆ ಲಾಠಿಯಿಂದ ಹೊಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಿಂದ ಉದ್ರಿಕ್ತಗೊಂಡ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ, ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಗಟ್ಟೆಯಲ್ಲಿ ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ.
ಮತಗಟ್ಟೆ ಕೇಂದ್ರದಲ್ಲಿ ಸಿಪಿಐ ಸದಲಗಿ ಹಾಗೂ ಗ್ರಾಮಸ್ಥರು ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು, ಗ್ರಾಮಸ್ಥರು ಪೊಲೀಸ್ ಅಧಿಕಾರಿಗೆ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡದ್ದಾರೆ. ಹುಲಗೆಮ್ಮ ಎನ್ನುವ ಮಹಿಳೆಯ ಕೈಗೆ ಲಾಠಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಈ ವೇಳೆ ಗ್ರಾಮಸ್ಥರು ಲಾಠಿಯಿಂದ ಹಲ್ಲೆ ಮಾಡಿದ ಸಿಬ್ಬಂದಿ ಮೇಲೆ ಕ್ರಮಕ್ಕೆ ಕೈಗೊಳ್ಳುವಂತೆ ಒತ್ತಾಯಿಸಿದರು.
ಮತಗಟ್ಟೆಯಲ್ಲಿ ಮತದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಸಂದರ್ಭದಲ್ಲಿ ನೂಕು ನುಗ್ಗಲು, ತಳ್ಳಾಟ ನಡೆದಿದೆ. ಈ ಸಂದರ್ಭದಲ್ಲಿ ಹುಲಗೆಮ್ಮ ಎನ್ನುವ ಮಹಿಳೆಯ ಕೈಗೆ ಲಾಠಿಯಿಂದ ಹೊಡೆಯಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ ಅವರು, ಹಲ್ಲೆಗೊಳಗಾದ ಮಹಿಳೆಯಿಂದ ಮಾಹಿತಿ ಪಡೆದುಕೊಂಡು, ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಇನ್ನೊಂದೆಡೆ ಮತ ಚಲಾಯಿಸಲು ಮತದಾರರು ಮುಗಿಬಿದಿದ್ದು, ಮತದಾರರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟ ಘಟನೆ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಗಜೇಂದ್ರಗಡ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3 ಮತಗಟ್ಟೆ ಸಂಖ್ಯೆ 87 ರಲ್ಲಿ ಮತದಾನ ಮಾಡಲು ಮತದಾರರು ಮುಗಿಬಿದ್ದಿದ್ದಾರೆ. ಸ್ಥಳಕ್ಕೆ ಪಿಎಸ್ಐ ನಾಗರಾಜ ಗಡಾದ ಧಾವಿಸಿ ಮತದಾರರನ್ನು ನಿಯಂತ್ರಿಸಲು ಮುಂದಾದರು ಸಹ ನೂಕಾಟ ತಳ್ಳಾಟ ನಡೆದಿದೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಇದನ್ನೂ ಓದಿ:ಪದ್ಮನಾಭ ನಗರದಲ್ಲಿ ಮತಗಟ್ಟೆ ಎದುರೇ ಮಾರಾಮಾರಿ.. ಕೈ ಕಾರ್ಯಕರ್ತರ ಮೇಲೆ ಪುಂಡರ ಗ್ಯಾಂಗ್ನಿಂದ ಹಲ್ಲೆ
ವ್ಯಕ್ತಿಯೊಬ್ಬನ ಮೇಲೆ ಪೊಲೀಸರಿಂದ ಲಾಠಿ ಏಟು: ವ್ಯಕ್ತಿಯೊಬ್ಬರಿಗೆ ಪೊಲೀಸರು ಲಾಠಿಯಿಂದ ಹಿಗ್ಗಾಮುಗ್ಗ ಹೊಡೆದಿರುವ ಆರೋಪ ಪ್ರಕರಣ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ಗುಂಪು ಚದುರಿಸುವಾಗ ಲಾಠಿ ಚಾರ್ಜ್ ಮಾಡಿದ್ದನ್ನ ಪ್ರಶ್ನಿಸಿದ ವ್ಯಕ್ತಿಗೆ ಪೊಲೀಸರು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಪೊಲೀಸರ ಈ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಸಂಜೀವ್ ರೆಡ್ಡಿ ಗೋವಣ್ಣವ ಹಲ್ಲೆಗೊಳಗಾದ ವ್ಯಕ್ತಿ. ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಗಲಾಟೆಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಇದನ್ನೂ ಓದಿ:ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತು ಬೇಸತ್ತು ಮನೆಗೆ ವಾಪಸಾದ ಮತದಾರರು!