ಗದಗ : ಸಂಜೆ ಮಳೆ ಸುರಿಯುತ್ತಿತ್ತು. ಮಗ ಬೆಚ್ಚಗೆ ಮಲಗಿದ್ದ.. ರಾತ್ರಿಯೂಟಕ್ಕೆ ಅಮ್ಮ ಚಿಕನ್ ತಯಾರಿಯಲ್ಲಿದ್ದಳು. ಅಷ್ಟರಲ್ಲಿ ಮಗನ ಮೊಬೈಲ್‌ಗೆ ತುರ್ತು ಕರೆಯೊಂದು ಬರುತ್ತೆ. ಆತ ದಿಢೀರನೆ ಮನೆಯಿಂದ ಹೊರಟೇಬಿಟ್ಟಿದ್ದ. ಹೀಗೆ ಹೋದವನು ಹಿಂತಿರುಗಿ ಬರಲೇ ಇಲ್ಲ. ಇತ್ತ ದಾರಿ ಕಾಯುತ್ತಲೇ ಕುಳಿತ ತಾಯಿಗೆ ರಾತ್ರಿ ಬಂದ ಆ ಸುದ್ದಿ ಸಿಡಿಲು ಬಡಿದಂತಿತ್ತು.
ಗದಗದಲ್ಲಿ ಮಧ್ಯರಾತ್ರಿ ಯುವಕನ ಬರ್ಬರ ಕೊಲೆ ಗದಗ ನಗರದಲ್ಲಿ ತಡರಾತ್ರಿ ಭೀಕರ ಹತ್ಯೆ ನಡೆದು ಹೋಗಿದೆ. 28 ವರ್ಷದ ಹಣ್ಣಿನ ವ್ಯಾಪಾರಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ತೀಸ್ ಬಿಲ್ಡಿಂಗ್ ಬಳಿ ಈ ಘಟನೆ ನಡೆದಿದೆ. ಬ್ಯಾಂಕ್ ರಸ್ತೆಯ ಅಯೋಧ್ಯಾ ಹೋಟೆಲ್ ಬಳಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ವಿವೇಕಾನಂದ ರಸ್ತೆಯ ನಿವಾಸಿ ಗುಂಡಪ್ಪ ಚಲವಾದಿ ಅಲಿಯಾಸ್ ಮುತ್ತು ಚಲವಾದಿ ಎಂಬಾತ ಬರ್ಬರವಾಗಿ ಹತ್ಯೆಯಾಗಿದ್ದ.ದುಷ್ಕರ್ಮಿಗಳು ಹರಿತವಾದ ಚಾಕುವಿನಿಂದ ಕತ್ತು, ತಲೆ, ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಹಲವು ಬಾರಿ ಇರಿದಿದ್ದಾರೆ. ರಾತ್ರಿ ಮಲಗಿದ್ದ ವೇಳೆ ಕರೆ ಮಾಡಿರುವ ಸ್ನೇಹಿತರು ಪಾರ್ಟಿ ಮಾಡೋಣ ಬಾ ಎಂದು ಕರೆದುಕೊಂಡು ಹೋಗಿದ್ದರಂತೆ. ನಂತರ ಈ ಘಟನೆ ನಡೆದು ಹೋಗಿತ್ತು.ಈ ಕೊಲೆ ಮೀಟರ್ ಬಡ್ಡಿ ಮಾಫಿಯಾ ಹಿನ್ನೆಲೆಯಲ್ಲಿ ನಡೆದಿರಬಹುದು ಎಂದು ಸಂಬಂಧಿಕರು ಆರೋಪಿಸುತ್ತಾರೆ. ಮ್ಯಾನೇಜರ್‌ವೊಬ್ಬರಿಗೆ ಕೊಡಿಸಿರುವ ಸಾಲದ ಹಿನ್ನೆಲೆಯಲ್ಲಿ ಮೀಟರ್ ಬಡ್ಡಿ ದಂಧೆಯ ಕಿಂಗ್ ಪಿನ್ ಒಬ್ಬರ ಜೊತೆಗೆ ಜಗಳವಾಗಿತ್ತಂತೆ. ಕೊಲೆಗೀಡಾದ ಯುವಕನಿಗೂ ಮತ್ತು ಆ ವ್ಯಕ್ತಿಗೂ ಮೊದಲೇ ಮನಸ್ತಾಪ ನಡೆದಿತ್ತು. ಅದೇ ಹಿನ್ನೆಲೆ ಮಗನ ಕೊಲೆ ನಡೆದಿದೆ ಎಂಬ ಮಾಹಿತಿ ಇದೆ.
ಇನ್ನೆರಡು ದಿನದಲ್ಲಿ ನನ್ನ ಮಗನ ಮದುವೆ ನಿಶ್ಚಯ ಕಾರ್ಯ ಇತ್ತು. ಅಷ್ಟರಲ್ಲೇ ಆತನ ಹತ್ಯೆ ನಡೆದಿದೆ. ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು ಅನ್ನೋದು ನೊಂದ ಪೋಷಕರ ಆಗ್ರಹ. ಘಟನಾ ಸ್ಥಳಕ್ಕೆ ಎಸ್ಪಿ ಯತೀಶ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂ ಓದಿ : ಕೋರ್ಟ್‌ನಲ್ಲಿ ವಾದ ಮುಗಿಸಿ ಮರಳುತ್ತಿದ್ದ ವಕೀಲನ ಮೇಲೆ ದುಷ್ಕರ್ಮಿಗಳಿಂದ ಮನಬಂದಂತೆ ಹಲ್ಲೆ