ಗದಗ: ಪ್ರತ್ಯೇಕ ಗ್ರಾಮ ಪಂಚಾಯತ್ ಬೇಕೆಂದು ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಿದ್ದ ಜಿಲ್ಲೆಯ ನೀಲಗುಂದ ಗ್ರಾಮದಲ್ಲಿ ಚಿಂಚಲಿ ಗ್ರಾಮದ ಯುವಕನೋರ್ವ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾಗಲು ಮುಂದಾಗಿದ್ದ. ಆದ್ರೀಗ ಆ ಯುವಕ ನಾಮಪತ್ರ ಹಿಂಪಡೆದಿದ್ದಾನೆ.
ಚಿಂಚಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನೀಲಗುಂದ ಗ್ರಾಮ ಅಭಿವೃದ್ಧಿ ಕೆಲಸಗಳಿಂದ ಹಿಂದೆ ಉಳಿದಿದೆ. ಹಾಗಾಗಿ ನಮ್ಮ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್ ಬೇಕು ಅಂತ ಗ್ರಾಮಸ್ಥರೆಲ್ಲರೂ ಸೇರಿ ಚುನಾವಣೆ ಬಹಿಷ್ಕಾರ ಮಾಡಿದ್ದರು. ಆದರೆ ಇವರ ಲೆಕ್ಕಾಚಾರ ತಲೆಕೆಳಗಾಗುವಂತೆ ವೀರೇಂದ್ರ ಲಕ್ಷ್ಮಿಗುಡಿ ಎಂಬ ಯುವಕ ನೀಲಗುಂದ ಗ್ರಾಮದ 9ನೇ ವಾರ್ಡ್ನ ಸಾಮಾನ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ. ಗ್ರಾಮಸ್ಥರು ಯುವಕನಿಗೆ ನಾಮಪತ್ರ ಹಿಂಪಡೆಯುಂತೆ ಎಷ್ಟೇ ಒತ್ತಡ ಹಾಕಿದರೂ ಹಿಂಪಡೆದಿರಲಿಲ್ಲ. ಆದರೆ ಸೋಮವಾರ ನೀಲಗುಂದ ಗ್ರಾಮದ ಎಲ್ಲ ಹಿರಿಯರ ಮನವಿ ಮೇರೆಗೆ ನಾಮಪತ್ರ ವಾಪಸ್ ಪಡೆದಿದ್ದಾನೆ.
ಓದಿ: ರಜಿನಿ ಹೊಸ ಪಕ್ಷದ ಹೆಸರು, ಚಿಹ್ನೆ ಬಹಿರಂಗ!?
ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡಿದ ಗ್ರಾಮದಲ್ಲಿ ಪರವೂರವರಾದ ನೀವು ಯಾಕೆ ನಾಮಪತ್ರ ಸಲ್ಲಿಕೆ ಮಾಡಿದ್ದೀರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ ವೀರೇಂದ್ರ, ಆ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಜೊತೆಗೆ ಆ ಗ್ರಾಮದಲ್ಲಿ ಕೇವಲ ಮೂರು ವಾರ್ಡ್ಗಳಿದ್ದು, ಸುಮಾರು 30 ಜನರು ಸ್ಪರ್ಧೆ ಮಾಡಲು ತೀರ್ಮಾನಿಸಿದ್ದರು. ಚುನಾವಣೆಗೆ ಯಾರು ಸ್ಪರ್ಧೆ ಮಾಡಬೇಕು ಅನ್ನೋ ತೀರ್ಮಾನದ ಹಿನ್ನೆಲೆಯಲ್ಲಿ ನೀಲಗುಂದ ಗ್ರಾಮಸ್ಥರು ಸಭೆ ನಡೆಸಿದ್ದರು. ಸಭೆಯಲ್ಲಿ 30 ಜನರು ಸ್ಪರ್ಧೆ ಮಾಡಲು ಮುಂದಾದಾಗ ಗೊಂದಲಕ್ಕೀಡಾದ ಗ್ರಾಮಸ್ಥರು, ಅಭ್ಯರ್ಥಿಗಳನ್ನು ಕಣಕ್ಕಿಳಿಸೋದನ್ನು ಬಿಟ್ಟು ನಮ್ಮೂರಿಗೇನೆ ಪ್ರತ್ಯೇಕ ಪಂಚಾಯತ್ ಬೇಕು ಅನ್ನೋ ತೀರ್ಮಾನಕ್ಕೆ ಬಂದರು. ಬಳಿಕ ದಿಢೀರ್ ಚುನಾವಣೆ ಬಹಿಷ್ಕಾರ ಮಾಡಿದ್ದರು.
ಹೀಗಾಗಿ ನಾನು ನಾಮಪತ್ರ ಸಲ್ಲಿಸಿದ್ದೆ. ಆದ್ರೀಗ ಗ್ರಾಮದ ಹಿರಿಯರ ಮನವಿಗೆ ಮಣಿದು ನಾನು ಸ್ಪರ್ಧೆಯಿಂದ ಹಿಂದೆ ಸರಿದು ಗ್ರಾಮಸ್ಥರ ಬೆಂಬಲಕ್ಕೆ ನಿಂತಿದ್ದೇನೆ ಎಂದಿದ್ದಾರೆ.