ಗದಗ: ಕೊರೊನಾ ಆತಂಕದ ನಡುವೆ ಜಿಲ್ಲೆಯಲ್ಲಿ ಈ ಬಾರಿ ಸಾರ್ವಜನಿಕರು ಸರಳವಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಂತೆ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತಿದೆ. ಕೊರೊನಾ ವೈರಸ್ ಹಿನ್ನೆಲೆ, ಈ ಬಾರಿಯ ಗಣೇಶ ಹಬ್ಬ ಕಳೆಗುಂದಿದೆ. ಅತ್ಯಂತ ಅದ್ದೂರಿಯಾಗಿ ಆಚರಿಸಲ್ಪಡುತ್ತಿದ್ದ ಗಣೇಶೋತ್ಸವ ಸಮಾರಂಭಗಳಿಗೆ ಈ ಬಾರಿ ತೆರೆ ಬಿದ್ದಿದೆ. ಸಾರ್ವಜನಿಕ ಗಣೇಶೋತ್ಸವ ಆಚರಿಸುವವರಿಗೆ ಸರ್ಕಾರದ ಸ್ಪಷ್ಟ ಮಾರ್ಗಸೂಚಿ ಹಿನ್ನಲೆಯಲ್ಲಿ ಸಭೆ-ಸಮಾರಂಭಗಳಿಲ್ಲದೆ ಗಣೇಶೋತ್ಸವ ಆಚರಣೆ ಆರಂಭಗೊಂಡಿದೆ.
ಮಾರ್ಕೆಟ್ಗಳು ಖಾಲಿ-ಖಾಲಿಯಾಗಿದ್ದು, ಸದ್ದು ಗದ್ದಲವಿಲ್ಲದೆ ವಿನಾಯಕ ಭಕ್ತರ ಮನೆ ಸೇರುತ್ತಿದ್ದಾನೆ. ಹೂ-ಹಣ್ಣು, ಬಾಳೆಕಂಬ, ಡೆಕೊರೇಷನ್ ಸಾಮಗ್ರಿಗಳ ಖರೀದಿಯಲ್ಲೂ ಜನ ಹಿಂದೇಟು ಹಾಕುತ್ತಿದ್ದು, ಸಂಪ್ರದಾಯ ಬಿಡಬಾರದೆಂಬ ಉದ್ದೇಶದಿಂದ ಸಣ್ಣ-ಪುಟ್ಟ ಲಂಬೋದರನ ಮೂರ್ತಿಯನ್ನು ಖರೀದಿಸಿ ಪೂಜಿಸುತ್ತಿದ್ದಾರೆ.