ಗದಗ : 4 ವರ್ಷದ ತನ್ನ ಪುಟ್ಟ ಮಗುವಿನೊಂದಿಗೆ ತಾಯಿಯೊಬ್ಬಳು ಮಲಪ್ರಭಾ ನದಿಗೆ ಹಾರಿದ್ದು, ಪವಾಡ ಸದೃಶ ರೀತಿಯಲ್ಲಿ ಮಹಿಳೆ ಬದುಕುಳಿದ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ನಡೆದಿದೆ.
ಇಂದು ನಸುಕಿನ ಜಾವ ತನ್ನ ಮೂವರು ಮಕ್ಕಳೊಂದಿಗೆ ಉಮಾದೇವಿ (45) ಆತ್ಮಹತ್ಯೆ ಮಾಡಿಕೊಳ್ಳಲು ನದಿ ಬಳಿ ಬಂದಿದ್ದಾರೆ. ಈ ವೇಳೆ ಇಬ್ಬರು ಮಕ್ಕಳು ಅಮ್ಮನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, 4 ವರ್ಷದ ಮಗುವಿನೊಂದಿಗೆ ತಾಯಿ ನೀರಿಗೆ ಜಿಗಿದಿದ್ದಾರೆ. ಆದರೆ ಅದೃಷ್ಟವಶಾತ್ ಕುರುವಿನಕೊಪ್ಪ ಗ್ರಾಮದ ಬಳಿಯ ಮುಳ್ಳಿನ ಗಿಡದಲ್ಲಿ ಉಮಾದೇವಿ ಸಿಲುಕಿಕೊಂಡಿದ್ದು, ಬದುಕುಳಿದಿದ್ದಾರೆ. ಆದರೆ ಆ ಪುಟ್ಟ ಕಂದಮ್ಮನ ಕುರಿತು ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ.
ಏನಿದು ಘಟನೆ?:
ಉಮಾದೇವಿ (45) ತನ್ನ 4 ವರ್ಷದ ಹೆಣ್ಣು ಮಗು ಸೇರಿದಂತೆ ಇನ್ನಿಬ್ಬರು ಮಕ್ಕಳೊಂದಿಗೆ ಇಂದು ಮುಂಜಾನೆ ಮಲಪ್ರಭಾ ನದಿ ಬಳಿಗೆ ಬಂದಿದ್ದಾರೆ. ತಾಯಿ, ಮೂರು ಮಕ್ಕಳ ಸಮೇತ ನದಿಗೆ ಹಾರಲು ಯತ್ನಿಸಿದಾಗ 12 ಹಾಗೂ 14 ವರ್ಷದ ಮಕ್ಕಳಿಬ್ಬರು ತಾಯಿಯಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ಬಳಿಕ ಪುಟ್ಟ ಕಂದಮ್ಮನೊಂದಿಗೆ ಮಹಿಳೆ ನೀರಿಗೆ ಹಾರಿದ್ದಾರೆ.
ಮೂರು ತಿಂಗಳ ಹಿಂದೆ ಈಕೆಯ ಪತಿ ಸಂಗಮೇಶ ಚಲ್ಲಿಕೇರಿ ಕೋವಿಡ್ನಿಂದ ಸಾವನ್ನಪ್ಪಿದ್ದರು. ಸಬಂಧಿಕರು ಹೇಳುವ ಪ್ರಕಾರ ಆಕೆಯ ಪತಿಯ ಸಾವಿನಿಂದ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿಲ್ಲ. 20 ಎಕರೆ ಜಮೀನು, ಪತಿಯ ಪಿಂಚಣಿ ಹಣ ಎಲ್ಲವೂ ಇತ್ತು. ಆದರೆ ಪತಿ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮಗುವಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.