ಗದಗ: ಗಂಡ-ಹೆಂಡತಿಯ ಮಧ್ಯೆ ಕೂಸು ಬಡವಾಯ್ತು ಎಂಬಂತೆ ಇಲ್ಲೊಬ್ಬರು ಪತಿ-ಪತ್ನಿಯ ಮಧ್ಯೆ ಇದ್ದ ಜಗಳವನ್ನು ಬಿಡಿಸಲು ಹೋಗಿ ಹೆಣವಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಗಂಡ ಹೆಂಡತಿಯ ರಾಜೀ ಪಂಚಾಯಿತಿಯ ವೇಳೆ ತನಗೆ ನ್ಯಾಯ ಒದಗಿಸಲಿಲ್ಲ ಎಂಬ ಕಾರಣಕ್ಕಾಗಿ ಮಧ್ಯವರ್ತಿಯನ್ನೇ ವ್ಯಕ್ತಿ ಕೊಲೆ ಮಾಡಿದ್ದಾನೆ.
ವಿಷ್ಣು ರೂಪಲಪ್ಪ ಪವಾರ್(35) ಕೊಲೆ ಮಾಡಿದವ. ಅತ್ತಿಕಟ್ಟಿ ತಾಂಡಾದ ಸೋಮಲಪ್ಪ ನಾಯಕ್(50) ಕೊಲೆಗೀಡಾದ ಮುಖಂಡ. ಹೊಟ್ಟೆ, ಎದೆ ಹಾಗೂ ಗಂಟಲು ಭಾಗಕ್ಕೆ ಬಲವಾಗಿ ಚಾಕು ಇರಿದ ಪರಿಣಾಮ ಸೋಮಲಪ್ಪ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಆರೋಪಿ ವಿಷ್ಣು ಪವಾರ್ ಸ್ವತಃ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.
ಘಟನೆ ಏನು?: ಕಳೆದ 4-5 ವರ್ಷಗಳಿಂದ ವಿಷ್ಣು ಪವಾರ್ ಮತ್ತು ಆತನ ಹೆಂಡತಿ ಸುಮಿತ್ರಾ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಆರೋಪಿ ವಿಷ್ಣು ತನ್ನ ಹೆಂಡತಿಯ ಮೇಲೆ ಸಂಶಯ ಪಡುತ್ತಿದ್ದನಂತೆ. ಪತಿಯ ಈ ನಡೆಯಿಂದ ಬೇಸತ್ತಿದ್ದ ಸುಮಿತ್ರಾ, ತಾಂಡಾ ಬಿಟ್ಟು ತವರು ಮನೆ ಸೇರಿದ್ದಳು. ದಂಪತಿಗೆ ನಾಲ್ವರು ಮಕ್ಕಳು ಸಹ ಇದ್ದಾರೆ.
ರಾಜೀ ಪಂಚಾಯತಿ ಮಾಡಿ ಗಂಡ-ಹೆಂಡತಿಯನ್ನು ಮತ್ತೆ ಒಂದು ಮಾಡಲು ತಾಂಡಾದ ಮುಖಂಡರು ಮುಂದಾಗಿದ್ದರು. ಆದರೆ, ಸುಮಿತ್ರಾ ಮುಖಂಡರ ಮಾತು ಕೇಳದೇ ತವರು ಮನೆಯಲ್ಲೇ ಉಳಿದಿದ್ದಳು. ಇದರಿಂದ ತಾಂಡಾದ ಮುಖಂಡರು ಸರಿಯಾಗಿ ರಾಜೀ ಪಂಚಾಯಿತಿ ಮಾಡಿಲ್ಲವೆಂದು ವಿಷ್ಣು ಸಿಟ್ಟು ಮಾಡಿಕೊಂಡಿದ್ದನಂತೆ.
ಗ್ರಾಮದ ಸೇವಾಲಾಲ್ ಉತ್ಸವದ ಕುರಿತು ಚರ್ಚಿಸಲು ಕಾರುಬಾರಿ, ನಾಯಕರು ಸಭೆ ಸೇರಿದ್ದರು. ಈ ವೇಳೆ ಏಕಾಏಕಿ ಗಲಾಟೆ ಎಬ್ಬಿಸಿದ ವಿಷ್ಣು ಪವಾರ್ ತಾಂಡಾದ ನಾಯಕ ಸೋಮಲಪ್ಪನನ್ನು ಕೊಲೆ ಮಾಡಿ ಸ್ವತಃ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯ ನಂತರ ತಾಂಡಾದ ಜನರು ಆರೋಪಿ ವಿಷ್ಣುಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಈ ಕೊಲೆಯ ಹಿಂದೆ ಇನ್ನೂ ಕೆಲವರು ಪ್ರಚೋದನೆ ನೀಡಿರುವ ಅನುಮಾನ ಇದೆ. ಹೀಗಾಗಿ ಘಟನೆ ಕುರಿತು ಸಂಪೂರ್ಣ ತನಿಖೆ ನಡೆಸಿ ಉಳಿದವರಿಗೂ ಸಹ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಓದಿ: ಬೆಂಕಿ ಹೊತ್ತಿದ್ದ ಇಂಜಿನ್‌ನಿಂದ ಬೋಗಿಗಳನ್ನು ಬೇರ್ಪಡಿಸಲು ರೈಲನ್ನೇ ತಳ್ಳಿದ ಪ್ರಯಾಣಿಕರು: ವಿಡಿಯೋ