ಗದಗ: ಅಫ್ಘಾನಿಸ್ತಾನವನ್ನು ತಾಲಿಬಾನ್ಗಳು ವಶಪಡಿಸಿಕೊಂಡ ನಂತರ ಅಲ್ಲಿನ ಸ್ಥಿತಿ ಹೇಳತೀರದ್ದಾಗಿದೆ. ರಾಯಭಾರ ಕಚೇರಿ ಭದ್ರತೆಗಿದ್ದ ಯೋಧರು ಸೇರಿ ಅನೇಕ ಭಾರತೀಯರು ತಾಲಿಬಾನಿಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದ್ದರು. ಸದ್ಯ ಅವರನ್ನೆಲ್ಲಾ ಏರ್ಲಿಫ್ಟ್ ಮಾಡುವ ಮೂಲಕ ತಾಯ್ನಾಡಿಗೆ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ.
ತವರಿಗೆ ಬಂದ ಯೋಧರಲ್ಲಿ ಮುದ್ರಣ ಕಾಶಿ ಗದಗ ಜಿಲ್ಲೆಯ ಬಳಗಾನೂರು ಗ್ರಾಮದ ರವಿ ನೀಲಗಾರ ಸಹ ಇದ್ದರು. 12 ವರ್ಷಗಳ ಹಿಂದೆಯೇ ITBP ಪಡೆಗೆ ಸೇರಿರುವ ರವಿ, ಎರಡು ವರ್ಷಗಳಿಂದ ಆಫ್ಘನ್ನಲ್ಲಿರುವ ರಾಯಭಾರ ಕಚೇರಿಯ ಭದ್ರತಾ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ತಾಲಿಬಾನಿಗಳ ಅಟ್ಟಹಾಸ ಶುರುವಾಗಿದ್ದೇ ತಡ ಭಾರತೀಯ ಸೈನ್ಯವನ್ನ ಕೇಂದ್ರ ಸರ್ಕಾರ ತವರಿಗೆ ಕರೆಸಿಕೊಂಡಿದೆ. ಹೀಗೆ ಯೋಧ ರವಿ ನೀಲಗಾರ ಸಹ ತವರಿಗೆ ಬಂದಿದ್ದು, ಕುಟುಂಬ ನಿಟ್ಟುಸಿರು ಬಿಟ್ಟಿದೆ.
ಆಫ್ಘನ್ನಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದ ಸಂದರ್ಭದಲ್ಲಿ ಸುಮಾರು 200 ಸೈನಿಕರ ಮೇಲೂ ಅವರು ಕ್ರೂರತ್ವ ಮೆರೆದಿದ್ದಾರಂತೆ. ಈ ವೇಳೆ ರವಿ ನೀಲಗಾರ ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ರವಿ ತನ್ನ ಮನೆಗೆಂದು ಖರೀದಿಸಿದ್ದ ಹೊಸ ಟಿವಿಯನ್ನೂ ಸಹ ತಾಲಿಬಾನಿಗಳು ಕಸಿದುಕೊಂಡು ವಿಕೃತಿ ಮೆರೆದಿದ್ದಾರೆ. ಹೀಗಾಗಿ ಜೀವ ಉಳಿದ್ರೆ ಸಾಕು ಅಂತ ಕೈಯಲ್ಲಿದ್ದ ಎಲ್ಲವನ್ನೂ ತಾಲಿಬಾನ್ಗಳಿಗೆ ಒಪ್ಪಿಸಿ ಫ್ಲೈಟ್ ಹತ್ತಿದ್ದಾರೆ ರವಿ.
ಈ ಭೀಕರ ಘಟನೆಯನ್ನ ಯೋಧ ರವಿ ತಮ್ಮ ಕುಟುಂಬ ಸದಸ್ಯರ ಜೊತೆ ಹೇಳಿಕೊಂಡಿದ್ದಾರೆ. ಮನೆಮಗ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿರುವುದು, ಹೋದ ಜೀವ ಬಂದಂತಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ.