ಗದಗ: ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ಗೆ ಕೇಂದ್ರ ಸರ್ಕಾರ 55 ಲಕ್ಷ ರೂ. ಸಬ್ಸಿಡಿ ಕೊಡುತ್ತಿದ್ದು, ಸಬ್ಸಿಡಿ ಹಣ ಬಳಸಿಕೊಂಡು ಸುಮಾರು 350 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಸಂಚಾರ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಸಕ್ಷ್ಮಣ ಸವದಿ ಹೇಳಿದ್ದಾರೆ.
ಹುಬ್ಬಳ್ಳಿ - ಧಾರವಾಡಕ್ಕೆ 50 ಬಸ್‌ಗಳನ್ನು ನೀಡಲಾಗುತ್ತಿದ್ದು, ಹುಬ್ಬಳ್ಳಿ-ಗದಗ ನಡುವೆಯೂ ಎಲೆಕ್ಟ್ರಿಕ್ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ನಗರದ ನವೀಕೃತ ಬಸ್ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಸಚಿವರು, ರೆಸಾರ್ಟ್ ರಾಜಕಾರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿಕ್ಕಮಗಳೂರಿಗೆ ಇಲಾಖೆಯ ಪರಿಶೀಲನಾ ಸಭೆಗೆ ಹೋದಾಗ ಸಚಿವರು, ಶಾಸಕರು ಭೇಟಿಯಾಗುವುದು ಸ್ವಾಭಾವಿಕ. ನಾನು ಇಲ್ಲಿಗೆ ಬಂದ ಮೇಲೆ ನನ್ನನ್ನು ಅನೇಕರು ಭೇಟಿ ಮಾಡುತ್ತಾರೆ. ಅದಕ್ಕೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದಿದ್ದಾರೆ.
ಈಗಾಗಲೇ ಶೇ.95 ರಷ್ಟು ಸರಿ ಹೋಗಿದೆ. ಇನ್ನುಳಿದ 5 ರಷ್ಟನ್ನೂ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ. ಸಹಜವಾಗಿ ಎಲ್ಲರಿಗೂ ದೊಡ್ಡ ಇಲಾಖೆ ಬೇಕು. ಆದರೆ, ಕೆಲಸ ಮಾಡಲು ಸಣ್ಣ ಹಾಗೂ ದೊಡ್ಡ ಇಲಾಖೆ ಅಂತಿಲ್ಲ. ಕೆಲಸ ಮಾಡುವವನಿಗೆ ಯಾವ ಇಲಾಖೆಯಾದರೂ ಸರಿ. ಭಾರ ಹೊರುವವನಿಗೆ ಹಿಂದೆ ಹೊತ್ತರು ಅಷ್ಟೇ, ಮುಂದೆ ಹೊತ್ತರು ಅಷ್ಟೇ ಎಂದು ವಲಸಿಗ ಸಚಿವ ಸ್ಥಾನದ ಅಸಮಾಧಾನದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಈಗಾಗಲೇ ಸಮಿತಿ ರಚಿಸಿದ್ದು, ಇನ್ನೊಂದು ತಿಂಗಳೊಳಗಾಗಿ ಬೇಡಿಕೆ ಈಡೇರಿಸಲಾಗುವುದು ಎಂದಿದ್ದಾರೆ.