ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಸಿಬಿಐ ಬಲೆಗೆ ನಿಜವಾದ ಆರೋಪಿಗಳು ಬಿದ್ದಿದ್ದಾರೆ.
ಈ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ಸಿಕ್ಕಂತಾಗಿದ್ದು, ಬೆಂಗಳೂರು, ತಮಿಳುನಾಡು ಮೂಲದ ಆರೋಪಿಗಳನ್ನು ಹೆಡೆಮುರಿ ಕಟ್ಟಿರುವ ಸಿಬಿಐ ಅಧಿಕಾರಿಗಳು, ಅಶ್ವತ್ಥ್, ಪುರುಷೋತ್ತಮ ಸೇರಿ ಐವರನ್ನು ವಶಕ್ಕೆ ಪಡೆದು ಧಾರವಾಡಕ್ಕೆ ಕರೆತಂದಿದ್ದಾರೆ.
ಬೆಂಗಳೂರು ಮೂಲದ ಸುಫಾರಿ ಹಂತಕರು ಬಲೆಗೆ ಬಿದ್ದಿದ್ದು, ಯೋಗೀಶಗೌಡ ಹತ್ಯೆ ಪ್ರಕರಣದ ನಂಬರ್ ಒನ್ ಆರೋಪಿ ಬಸವರಾಜ ಮುತ್ತಗಿ ಅವರಿಂದ ಸುಫಾರಿ ಪಡೆದುಕೊಂಡಿದ್ದರಂತೆ. ಸಿನಿಮೀಯ ಮಾದರಿಯಲ್ಲಿ ಸಿಬಿಐ ಅಧಿಕಾರಿಗಳು ಆರೋಪಿಗಳ ಮೇಲೆ ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನದ ಭೀತಿಯಲ್ಲಿದ್ದ ಆರೋಪಿಗಳು ತಮಿಳುನಾಡಿಗೆ ಕಾಲ್ಕಿಳುತ್ತಿದ್ದ ವೇಳೆ ವಶಕ್ಕೆ ಪಡೆದುಕೊಳ್ಳಲಾಗಿದ್ದು, ನ್ಯಾಯಾಧೀಶರ ವಸತಿ ಗೃಹಕ್ಕೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದಾರೆ. ಕಾರಿನಲ್ಲಿ ಮೂವರು ಅಧಿಕಾರಿಗಳು ಆಗಮಿಸಿದ್ದು, ಆರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪ್ರಧಾನ ಜೆಎಂಎಫ್‌ಸಿ ನ್ಯಾಯಾಧೀಶೆ ವಿಜಯಲಕ್ಷ್ಮಿ ಘಾಣಾಪುರ ಸೂಚಿಸಿದ್ದಾರೆ.