ಹುಬ್ಬಳ್ಳಿ: ಯುವಕರ ಗುಂಪೊಂದು ನಗರದ ರೈಲ್ವೆ ನಿಲ್ದಾಣದಲ್ಲಿ ಫೋಟೋ ತೆಗೆದಿದ್ದು, ಭದ್ರತಾ ದೃಷ್ಟಿಯಿಂದ ಸಿಆರ್ಪಿಎಫ್ ಸಿಬ್ಬಂದಿ ಪೋಟೋ ಡಿಲಿಟ್ ಮಾಡಲು ಹೇಳಿದ್ದಾರೆ. ಆದರೆ ಮಾತಿಗೆ ಮಾತು ಹೆಚ್ಚಾಸಿದ ಪುಂಡರು, ಸಿಬ್ಬಂದಿಗೆ ಗನ್ ತೋರಿಸಿ ಜಗಳಕ್ಕಿಳಿದು ಕೊನೆಗೆ ಕಂಬಿ ಎಣಿಸುತ್ತಿದ್ದಾರೆ.
ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್ ಕಾಯ್ದುಕೊಳ್ಳಲಾಗಿದೆ, ಈ ಹಿನ್ನೆಲೆಯಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಎಲ್ಲಾ ಕಡೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲೂ ಬಿಗಿ ಭದ್ರತೆ ನೀಡಲಾಗಿದ್ದು, ನಿಲ್ದಾಣದ ವಿಐಪಿ ಲಾಂಜ್ ಬಳಿ ಮೊಬೈಲ್ನಲ್ಲಿ ಫೋಟೋ ತೆಗೆಯುತ್ತಿದ್ದ ಪುಂಡರ ಗುಂಪಿಗೆ ಫೋಟೋ ಡಿಲೀಟ್ ಮಾಡುವಂತೆ ಸಿ.ಆರ್.ಪಿ.ಎಫ್ ಪೇದೆ ರವಿಕುಮಾರ್ ಹೇಳಿದ್ದಾರೆ. ಇದೇ ವೇಳೆ ವಾಗ್ವಾದ ನಡೆದು ಪುಂಡರನ್ನು ಬೆದರಿಸಲು ಪೇದೆ ಬಂದೂಕು ತೋರಿಸಿದ್ದಾನೆ. ಇಷ್ಟಕ್ಕೇ ಆಕ್ರೋಶಗೊಂಡ ಪುಂಡನೊಬ್ಬ ನನ್ನ ಬಳಿಯೂ ರಿವಾಲ್ವಾರ್ ಇದೆ ಎಂದು ದರ್ಪ ತೋರಿದ್ದಾನೆ.
ಕರ್ತವ್ಯ ನಿರತ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಟೂರು ರಸ್ತೆಯ ಬ್ಯಾಳಿ ಓಣಿ ನಿವಾಸಿ ಶರೀಫ ಆದೋನಿ ಹಾಗೂ ಆತನ ಜೊತೆಗೆ ಇದ್ದ ಮಜಹರ್ ಎಂಬುವವನನ್ನ ಬಂಧಿಸಿದ್ದಾರೆ. ಇದರಿಂದ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸದ್ಯ ಪೊಲೀಸರು ಪಿಸ್ತೂಲ್ ಪರವಾನಗಿ ಹಾಗೂ ಆರೋಪಿಗಳ ಹಿನ್ನೆಲೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.