ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಕೊಲೆಯಾಗಿರುವ ಯೋಗೇಶಗೌಡ ಅವರ ಪತ್ನಿ ಮಲ್ಲಮ್ಮ, ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿದಂತೆ ಹಲವರನ್ನು ಇಲ್ಲಿನ ಉಪನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುತ್ತಿದ್ದಾರೆ. ಸದ್ಯ ಮಲ್ಲಮ್ಮನ ತಂಗಿ ಸುಮಾ ಹಾಗೂ ಯೋಗೀಶಗೌಡನ ಸಹೋದರ ಗುರುನಾಥಗೌಡ ಠಾಣೆಗೆ ಆಗಮಿಸಿದ್ದಾರೆ.
ಯೋಗೇಶಗೌಡ ಅವರ ಪತ್ನಿ ಮಲ್ಲಮ್ಮ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗ್ತಿದೆ.
ಧಾರವಾಡಕ್ಕೆ ನಿನ್ನೆಯೇ ಸಿಬಿಐ ಅಧಿಕಾರಿಗಳ ತಂಡ ಆಗಮಿಸಿದೆ. ಇನ್ನೂ ಕೆಲವರನ್ನು ಉಪನಗರ ಠಾಣೆಗೆ ಕರೆಯಿಸಿ ವಿಚಾರಿಸುವ ಸಾಧ್ಯತೆಯಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಸಹೋದರ ವಿಜಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಕೆಲ ದಿನಗಳ ಕಾಲ ಅಧಿಕಾರಿಗಳು ಧಾರವಾಡದಲ್ಲಿಯೇ ಉಳಿದುಕೊಳ್ಳಲಿದ್ದಾರೆ.
ಯೋಗೀಶ್ ಗೌಡ ಕೊಲೆ ಪ್ರಕರಣ; ಸಿಬಿಐ ತನಿಖೆ ಮತ್ತಷ್ಟು ಚುರುಕು
ಸಿಬಿಐ ಅಧಿಕಾರಿಗಳು ನಾಲ್ಕು ಬಾಕ್ಸ್ನಲ್ಲಿ ಯೋಗೀಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಮಹತ್ವದ ದಾಖಲೆಗಳನ್ನು ತಂದಿದ್ದು, ದಾಖಲೆಗಳನ್ನು ಕಾರಿನಿಂದ ಉಪನಗರ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ದಾರೆ.
ಕಳೆದ ಒಂದೂವರೆ ಗಂಟೆಯಿಂದ ಮಲ್ಲಮ್ಮ ಯೋಗೀಶಗೌಡ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇದೀಗ ಮಲ್ಲಮ್ಮನ ತಂಗಿ ಸುಮಾ ಹಾಗೂ ಯೋಗೀಶಗೌಡನ ಸಹೋದರ ಗುರುನಾಥಗೌಡನನ್ನು ವಿಚಾರಣೆಗೆ ಕರೆಸಿಕೊಂಡಿದೆ.