ಧಾರವಾಡ: ಹಂದಿಗಳ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಹಂದಿಗಳು ಗ್ರಾಮದ ಅಕ್ಕ ಪಕ್ಕದಲ್ಲಿರುವ ಬೆಳೆ ಹಾಳು ಮಾಡಿದ್ದವು. ಇದನ್ನ ಹಲವು ಬಾರಿ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಪಂಚಾಯ್ತಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಪಿಡಿಒರನ್ನ ಕೂಡಾ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೀಗ ತೆಗೆಯಲು ಮುಂದಾದ ಪಿಡಿಒಗೆ ಕೂಡಾ ಘೇರಾವ್ ಹಾಕಿದ್ದಾರೆ ಎನ್ನಲಾಗಿದೆ. ನಂತರ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಿದ್ದಾರೆ. ಹಂದಿಗಳ ಹಾವಳಿಯಿಂದ ಮುಕ್ತಿ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.