ಹುಬ್ಬಳ್ಳಿ: ವೇಗವಾಗಿ ಚಲಿಸುತ್ತಿದ್ದ ವಾಹನವೊಂದರ ಮುಂಭಾಗದ ಎಕ್ಸೆಲ್ ತುಂಡಾದ ಪರಿಣಾಮ ವ್ಯಕ್ತಿವೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಸುಗಲ್ ಗ್ರಾಮದ ಬಳಿ ನಡೆದಿದೆ.
ರಾಯನಾಳ ಗ್ರಾಮದ ನಿವಾಸಿ ಮತ್ತು ಸಾರಿಗೆ ಸಂಸ್ಥೆ ನಿವೃತ್ತ ಚಾಲಕ ಗದಿಗೆಪ್ಪ ಯಲ್ಲಪ್ಪ ಅರಕೇರಿ (65) ಘಟನೆಯಲ್ಲಿ ಮೃತಮಟ್ಟವರು. ಅದೇ ಗ್ರಾಮದ ನಾಗಪ್ಪ ಅರಕೇರಿ (68), ಶಿವಕ್ಕ ಉಳ್ಳಾಗಡ್ಡಿ (55) ಹಾಗೂ ರುದ್ರಪ್ಪ ಹುಬ್ಬಳ್ಳಿ (35) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗದಿಗೆಪ್ಪ ಅರಕೇರಿ ಅವರ ಸಹೋದರನ ಮಗಳ ಸಂಸಾರದ ಸಂಬಂಧ ಗಟ್ಟಿಗೊಳಿಸಲು ಹಾಳಕುಸುಗಲ್ ಗ್ರಾಮಕ್ಕೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.