ಹುಬ್ಬಳ್ಳಿ : ವಾಣಿಜ್ಯನಗರಿಯ ನಾರಿಯೊಬ್ಬರು ಯೋಗ ಕಲೆಗಳಿಂದ ಯೋಗ ಕ್ಷೇತ್ರದಲ್ಲಿ ವಿವಿಧ ದಾಖಲೆ ನಿರ್ಮಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನಗರದ ವಿಜಯನಗರದ ನಿವಾಸಿ ಯೋಗಪಟು ವಿಜಯಲಕ್ಷ್ಮಿ ಶಿರಳ್ಳಿ ತಮ್ಮ ವಿವಿಧ ರೀತಿಯ ಯೋಗ ಕಲೆಗಳಿಂದ ಕಳೆದ ನವೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿದ್ದ ಕಲಾಂ ವರ್ಲ್ಡ್ ರೆಕಾರ್ಡ್ಸ್ ಆನ್ಲೈನ್ ಯೋಗ ಸ್ಪರ್ಧೆಯಲ್ಲಿ ಕೇವಲ 25 ಸೆಕೆಂಡ್‌ಗಳಲ್ಲಿ ಯೋಗಾಸನಗಳನ್ನು ಪ್ರದರ್ಶಿಸಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಅಷ್ಟೇ ಅಲ್ಲ, ಎಸ್‌ಜಿಎಸ್ ಬೆಂಗಳೂರು ಆಯೋಜಿಸಿದ್ದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿ ಮಲೇಷಿಯಾಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಯೋಗನಿಧಿ ಅವಾರ್ಡ್, ಮೈಸೂರು ದಸರಾ ಮಹೋತ್ಸವದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸೇರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಹಾಗೂ ರಾಜ್ಯ ಮಟ್ಟದಲ್ಲಿ ಯೋಗ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ವಿಜಯಲಕ್ಷ್ಮಿ ಜಲಯೋಗ ಕೂಡ ಮಾಡುತ್ತಿರುವುದು ವಿಶೇಷ.
12 ವರ್ಷಗಳಿಂದ ಉಚಿತವಾಗಿ ಮಕ್ಕಳಿಗೆ ಹಾಗೂ ಸ್ತ್ರೀಯರಿಗೆ ಯೋಗ ಕಲಿಸಿ ಮನೆ ಮಾತಾಗಿದ್ದಾರೆ. ತಾಯಿಯಂತೆ ಮಗಳು ಸಹ ಯೋಗಪಟುವಾಗಿದ್ದು, ತಾಯಿಯ ಹಾದಿಯಲ್ಲಿ ಮಗಳು ಸಾಗುತ್ತಿರುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.