ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ವರ್ಕ್ ಫ್ರಮ್ ಹೋಮ್ (Work from Home) ಎಂಬ ಲಿಂಕ್ ಕ್ಲಿಕ್ ಮಾಡಿದ ಯುವತಿಯೊಬ್ಬಳ ಬ್ಯಾಂಕ್ ಖಾತೆಯಿಂದ 3,00,452 ರೂ.(ಮೂರು ಲಕ್ಷದ ನಾಲ್ಕುನೂರ ಐವತ್ತೆರಡು ರೂಪಾಯಿ) ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕುಲ ರಸ್ತೆ ಮುರಾರ್ಜಿ ನಗರದ ಶೀಲಾ ಎಂಬುವರು ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ವರ್ಕ್ ಫ್ರಮ್ ಹೋಮ್ ಇರುವ ಕಾರಣ ಇಲ್ಲೇ ಇದ್ದು ಕೆಲಸ ಮಾಡುತ್ತಿದ್ದಾರೆ. ಬಿಡುವಿನ ವೇಳೆ ಹೆಚ್ಚಿನ ದುಡಿಮೆ ಮಾಡಬೇಕೆಂಬ ಆಸೆಯಿಂದ ಗೂಗಲ್‌ನಲ್ಲಿ 'ಆನ್‌ಲೈನ್ ವರ್ಕ್ ಎಟ್ ಹೋಮ್ ಈಸಿ ವೇ ಟು ಮೇಕ್ ಮನಿ' ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು. ಇದನ್ನು ಗಮನಿಸಿದ ವಂಚಕರು ವೆಬ್‌ಸೈಟ್, ವಾಟ್ಸ್ಆ್ಯಪ್ ಮೂಲಕ ಯುವತಿಯನ್ನು ಸಂಪರ್ಕಿಸಿದ್ದರು.
ಆನ್‌ಲೈನ್ ಶಾಪಿಂಗ್ ಮೂಲಕ ಹಣ ಗಳಿಸಬಹುದು. 100 ರೂ. ವಸ್ತು ಖರೀದಿಸಿದರೆ, 110 ರೂ. ಗಳಿಸಬಹುದು ಎಂದು ನಂಬಿಸಿದ್ದರು. ಆ ಬಳಿಕ ಹಂತ-ಹಂತವಾಗಿ ಶಾಪಿಂಗ್ ನೆಪದಲ್ಲಿ ವಂಚಕರು ಹಣ ವರ್ಗಾಯಿಸಿಕೊಂಡಿದ್ದರು. ನಿಮ್ಮ ಕಮಿಶನ್ ಹಾಗೂ ಅಸಲು ಹಣ ಫ್ರೀಜ್ ಆಗಿದೆ. ನಿಮ್ಮ ಖಾತೆಗೆ ಹಣ ಜಮೆ ಆಗಬೇಕಾದರೆ ತೆರಿಗೆ ತುಂಬಬೇಕು ಎಂದು ನಂಬಿಸಿ ಮತ್ತಷ್ಟು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆಂದು ದೂರಿನಲ್ಲಿ ದಾಖಲಿಸಲಾಗಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: 2019ರ Miss Kerala ಅನ್ಸಿ, Runner up ಅಂಜನಾ ಸಾವು