ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೈ ಪಾಳಯದ ಅಭ್ಯರ್ಥಿ ಯಾರಾಗ್ತಾರೆ ಎನ್ನುವುದು ಇನ್ನೂ ನಿಗೂಢವಾಗಿದೆ. ಅಭ್ಯರ್ಥಿ ಘೋಷಣೆ ವಿಳಂಭವಾಗುತ್ತಿರುವುದು ಕೈ ಕಾರ್ಯಕರ್ತರ ನಿರಾಶೆಗೆ ಕಾರಣವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಚೇರಿ ಬಳಿ ಯಾರು ಸುಳಿಯದಿರುವುದರಿಂದ ಕೈ -ತೆನೆ ಕಚೇರಿ ಈಗ ಕಾರ್ಯಕರ್ತರಿಲ್ಲದೆ ಬಣಗುಡುತ್ತಿವೆ.
ರಾಜ್ಯದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ತನ್ನ ಪಾಲಿನ 20 ಕ್ಷೇತ್ರಗಳ ಪೈಕಿ 19 ರಲ್ಲಿ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಿದೆ. ಆದ್ರೆ ಧಾರವಾಡ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾತ್ರ ಕಗ್ಗಂಟಾಗಿದೆ. ಇದುವರೆಗೂ ಅಭ್ಯರ್ಥಿ ಘೋಷಣೆಯಾಗದಿರುವುದರಿಂದ, ಧಾರವಾಡ ಕ್ಷೇತ್ರದ ಕೈ ಕಾರ್ಯಕರ್ತರ ಉತ್ಸಾಹ ಕಡಿಮೆಯಾದಂತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಚೇರಿಗಳು ಕಾರ್ಯಕರ್ತರಿಲ್ಲದೆ ಬಣಗುಡುತ್ತಿದೆ. ಅಭ್ಯರ್ಥಿ ಯಾರಾಗ್ತಾರೆ ಎನ್ನುವ ಕೂತೂಹಲದಲ್ಲೆ ಇರುವ ಕಾರ್ಯಕರ್ತರು, ಪ್ರಚಾರದ ಕಣಕ್ಕೆ ಇಳಿಯುತ್ತಿಲ್ಲ.
ಆದ್ರೆ, ಕೈ ಪಾಳಯದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಮಾಜಿ ಸಂಸದ ಐ.ಜಿ ಸನದಿ ಪುತ್ರ ಶಾಕೀರ ಸನದಿ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆದಿದೆ. ಅಲ್ಪಸಂಖ್ಯಾತರಿಗೆ ಈ ಸಲ ಟಿಕೆಟ್ ನೀಡಬೇಕು ಎನ್ನುವ ಕೂಗು ಜಿಲ್ಲೆಯಲ್ಲಿ ಜೋರಾಗಿದೆ. ಆದರೆ ಕೈ ಕಾರ್ಯಕರ್ತರು ಮಾತ್ರ ಅಭ್ಯರ್ಥಿ ಹೆಸರು ಘೋಷಣೆಯಾಗುವವರೆಗೂ ಪ್ರಚಾರಕ್ಕೆ ಇಳಿಯುವ ಸಾಧ್ಯತೆ ಕಾಣುತ್ತಿಲ್ಲ.
ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಸಂಸದ ಪ್ರಹ್ಲಾದ್ ಜೋಶಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇತ್ತ ಬಿಜೆಪಿಯವರು ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮೇಲೆ ಬಿಜೆಪಿ ಪ್ರಚಾರ ತೀವ್ರಗೊಳಿಸುವ ಸಾಧ್ಯತೆ ಹೆಚ್ಚಿದೆ.