ಧಾರವಾಡ: ಕಬ್ಬು ಬೆಳೆಗಳ ಮೇಲೆ ಕಾಡುಹಂದಿಗಳ ವಕ್ರದೃಷ್ಟಿ ಬಿದ್ದಿದ್ದು, ಇದರಿಂದ ರೈತರು ಬೇಸತ್ತು ಹೋಗಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳ ಪೈಕಿ ಕಬ್ಬು ಕೂಡ ಒಂದು. ಹೀಗಾಗಿ ಅನೇಕ ರೈತರು ಕಬ್ಬು ಬೆಳೆ ಬೆಳೆಯುತ್ತಾರೆ. ಈ ಕಾಡು ಹಂದಿಗಳ ಕಾಟದಿಂದ ಬೆಳೆ ರಕ್ಷಿಸಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ.
ರಾತ್ರಿಯಾದ್ರೆ ಸಾಕು, ತಮ್ಮ ತಮ್ಮ ಕಬ್ಬಿನ ಗದ್ದೆಗೆ ಹೋಗಿ ಬೆಳೆಯನ್ನು ಸಂರಕ್ಷಣೆ ಮಾಡಿಕೊಳ್ಳುವುದು ತಲೆನೋವಾಗಿ ಪರಿಣಮಿಸಿದೆ. ಧಾರವಾಡ ತಾಲೂಕಿನ ಬಹುತೇಕ ಗ್ರಾಮಗಳ ರೈತರು ಸುಮಾರು ವರ್ಷಗಳಿಂದ ಕಬ್ಬು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಆದರೆ ರಾತ್ರಿಯಾದ್ರೆ ಜಮೀನಿಗೆ ನುಗ್ಗುವ ಕಾಡುಹಂದಿಗಳು ಬೆಳೆಗಳನ್ನು ಹಾಳು ಮಾಡುತ್ತಿವೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂಬುದು ರೈತರ ವಾದವಾಗಿದೆ. ಧಾರವಾಡ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬನ್ನು ಬೆಳೆಯಲಾಗಿದೆ. ಪೂರ್ವ ಮುಂಗಾರು ಮಳೆಯ ಕೃಪೆಯಿಂದಾಗಿ ಕಬ್ಬು ಅದಾಗಲೇ ಎತ್ತರಕ್ಕೆ ಬೆಳೆದು ನಿಂತಿದೆ. ಆದರೆ ಇದೀಗ ಹಂದಿಗಳ ಕಾಟದಿಂದ ರೈತರು ರೋಸಿ ಹೋಗಿದ್ದಾರೆ. ಈ ಕುರಿತು ಅಧಿಕಾರಿಗಳು ಗಮನವಹಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಅನ್ನದಾತರು ಆಗ್ರಹಿಸಿದ್ದಾರೆ.