ಹುಬ್ಬಳ್ಳಿ : ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಯೋಜನೆಗಳನ್ನು ಭ್ರಷ್ಟಾಚಾರ ರಹಿತವಾಗಿ ಜನರಿಗೆ ಮುಟ್ಟಿಸುತ್ತೇನೆ. ಖಂಡಿತವಾಗಿಯೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ನೂತನ ಕೈಮಗ್ಗ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಭವನದಲ್ಲಿಂದು ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೋವಿಡ್ 3ನೇ ಅಲೆ ನಿಯಂತ್ರಣ ಹಾಗೂ ನೆರೆ ಹಾವಳಿ ಕುರಿತು ಧಾರವಾಡದಲ್ಲಿ ಮಹತ್ವದ ಸಭೆ ನಡೆಸಿದ್ದೇನೆ. ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಮಂತ್ರಿ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಅದನ್ನು ಯಶಸ್ವಿಯಾಗಿ ಸದ್ಬಳಕೆ ಮಾಡಿಕೊಂಡು ನಿಭಾಯಿಸಲಾಗುವುದು ಎಂದು ತಿಳಿಸಿದರು.
ಕೊರೊನಾ 3ನೇ ಅಲೆ ತಡೆಗೆ ಸರ್ವ ಪ್ರಯತ್ನ ಮಾಡಲಾಗುವುದು. ಆಕ್ಸಿಜನ್ ಕೊರತೆ ಹಾಗೂ ವೆಂಟಿಲೇಟರ್ ಕೊರತೆಯಾಗದಂತೆ ಎಲ್ಲ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಅಧಿಕಾರಿಗಳ ಜೊತೆಗೆ 750 ಚಿಕ್ಕ ಮಕ್ಕಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದೇನೆ. ಕಿಮ್ಸ್, ಸಿವಿಲ್ ಆಸ್ಪತ್ರೆ ಒತ್ತಡ ಜಾಸ್ತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಮಹಾದಾಯಿ ಕುಡಿಯೋ ನೀರಿನ ಯೋಜನೆಗೆ ಸಂಬಂಧಿಸಿದಂತೆ ಟ್ರಿಬ್ಯುನಲ್ನಲ್ಲಿ 4 ಟಿಎಂಸಿ ಕೊಡುವಂತೆ ಆದೇಶ ಆಗಿದೆ. ಸಣ್ಣಪುಟ್ಟ ತೊಡಕುಗಳನ್ನ ಬಗೆಹರಿಸಿ ಯೋಜನೆಯನ್ನ ಜಾರಿ ಮಾಡುತ್ತೇವೆ. ಈ ಬಗ್ಗೆ ಗೊಂದಲಗಳು ಆಗಬಾರದು. 330 ಹಳ್ಳಿಗಳಿಗೂ ನೀರು ಕೊಡುವ ಯೋಜನೆ ಮಾಡುತ್ತಿದ್ದೇವೆ. ಕಳಸಾ-ಬಂಡೂರಿ ಗೊಂದಲದ ಹೇಳಿಕೆ ನೀಡುವುದು ಬೇಡ. ಮೂರು ರಾಜ್ಯಗಳ ಸಹಕಾರ ಈ ವಿಚಾರದಲ್ಲಿ ಬೇಕಾಗುತ್ತದೆ ಎಂದು ತಿಳಿಸಿದರು.
ತುಪ್ಪರಿ ಹಳ್ಳ ಮತ್ತು ಬೆಣ್ಣೆ ಹಳ್ಳದ ಡ್ರೋನ್ ಸರ್ವೇ ಆಗಿದೆ. 60 ದಿನಗಳಲ್ಲಿ ಜನರಿಗೆ ಸಿಹಿ ಸುದ್ದಿ ನೀಡುತ್ತೇನೆ. ಯಾವ ಖಾತೆ ಕೊಟ್ಟರೂ ನಾನು ನಿಭಾಯಿಸುತ್ತೇನೆ ಎಂದರು. ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗಾಗಿ ವಸತಿ ಯೋಜನೆ ಮನವಿ ಕೊಟ್ಟಿದ್ದೀರಿ.
ಅದು ನೆನಗುದಿಗೆ ಬಿದ್ದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಮೂರು ದಿನಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಜೊತೆಗೆ ಮಾತನಾಡಿ ಮನೆ ಒದಗಿಸುವ ಕೆಲಸ ಮಾಡುತ್ತೇನೆ. ಧಾರವಾಡ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಪತ್ರಕರ್ತರಿದ್ದಾರೆ. ಜಿಲ್ಲೆಯಲ್ಲಿ ಮನೆ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಸುಶಿಲೇಂದ್ರ ಕುಂದರಗಿ, ಜಗದೀಶ ಬುರ್ಲಬುಡ್ಡಿ, ಡಾ. ವೀರೇಶ್ ಹಂಡಿಗಿ ಸೇರಿದಂತೆ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಮುದ್ರಣ ಮತ್ತು ದೃಶ್ಯ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಓದಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ಆದೇಶದ ಮರು ಚರ್ಚೆಯ ಅಗತ್ಯವಿದೆ : ವಿಪಕ್ಷ ನಾಯಕ ಸಿದ್ದರಾಮಯ್ಯ