ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಸಾಕಷ್ಟು ಪ್ರಯತ್ನಗಳು ನಡೆದವು. ಆದರೆ, ಅವರು ರಾಜಕೀಯವಾಗಿ ಮತ್ತೆ ಪುಟಿದೇಳುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ನಿಖೇತರಾಜ್ ಮೌರ್ಯ ಅವರು ಹೇಳಿದರು. ಇಂದು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪರವಾಗಿ ನಡೆದು ಮತಯಾಚನೆ ಸಭೆಯಲ್ಲಿ ನಿಖೇತರಾಜ್ ಮೌರ್ಯ ಮಾತನಾಡಿದರು.
ಚುನಾವಣೆ ಬಂದಾಗ ಬಿಜೆಪಿಯವರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಪ್ರತಿವರ್ಷ ನಮಗೇ ಗೊತ್ತಿಲ್ಲದೇ ನಮ್ಮ ಜೇಬಿಂದ ಒಂದೂವರೆ ಲಕ್ಷ ರೂಪಾಯಿ ಟ್ಯಾಕ್ಸ್ ವಸೂಲಿ ಮಾಡುತ್ತಿದ್ದಾರೆ. ಇದೇ ಹಣ ನಮಗೆ ಕೊಟ್ಟು ಚುನಾವಣೆ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮತಕೇಳಲು ಬಂದಾಗ ಜನ ಇದನ್ನು ಪ್ರಶ್ನೆ ಮಾಡಬೇಕು. ವಿನಯ್ ಕುಲಕರ್ಣಿ ಈ ಭಾಗದ ದೊಡ್ಡ ನಾಯಕರು. ಅವರನ್ನು ಎಷ್ಟೇ ಹತ್ತಿಕ್ಕಲು ಪ್ರಯತ್ನಿಸಿದರೂ ಅವರು ಮತ್ತೆ ಮತ್ತೆ ಪುಟಿದೇಳುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಹೇಳಿದರು.
ಇದನ್ನೂ ಓದಿ : ಜಗದೀಶ್ ಶೆಟ್ಟರ್ ಅಧಿಕಾರದಲ್ಲಿದ್ದಾಗ ಎಷ್ಟು ಜನರಿಗೆ ಟಿಕೆಟ್ ನೀಡಿದ್ದರು ಎಂದು ಹೇಳಲಿ : ನಳಿನ್ ಕುಮಾರ್ ಕಟೀಲ್
ಇದೇ ವೇಳೆ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಮಾತನಾಡಿ, ವಿನಯ್ ಕುಲಕರ್ಣಿ ಬಗ್ಗೆ ಹೊರಗಿನವರು ಯಾರು ಏನನ್ನು ಹೇಳುವುದು ಬೇಕಿಲ್ಲ. ಎರಡು ಬಾರಿ ಈ ಭಾಗದಿಂದ ಆಯ್ಕೆ ಮಾಡಿ ಕಳುಹಿಸಿದ್ದೀರಿ. ಈ ಭಾಗದ ಯುವಕರಿಗೆ ಉದ್ಯೋಗ ಸಿಗಬೇಕು ಎಂಬ ಉದ್ದೇಶದಿಂದ ಮಾರ್ಕೊಪೊಲೊದಂತಹ ಕಂಪೆನಿಗಳನ್ನು ತಂದು ಈ ಭಾಗದ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ವಿನಯ್ ಕುಲಕರ್ಣಿ ಅವರು ಮಾಡಿದ್ದರು. ಐದು ವರ್ಷ ಬಿಜೆಪಿ ಅಭ್ಯರ್ಥಿಯ ಕೆಲಸವನ್ನೂ ನೀವು ನೋಡಿದ್ದೀರಿ, ವಿನಯ್ ಕುಲಕರ್ಣಿ ಅವರ ಕೆಲಸವನ್ನೂ ನೋಡಿದ್ದೀರಿ. ಈ ಭಾಗದಲ್ಲಿ ಹೆದರಿಸುವ ಬೆದರಿಸುವ ಕೆಲಸ ನಡೆದಿದೆ. ಯಾರೂ ಹೆದರುವ ಅಗತ್ಯವಿಲ್ಲ. ಈ ಬಾರಿ ವಿನಯ್ ಕುಲಕರ್ಣಿ ಅವರನ್ನು ಬೆಂಬಲಿಸಿದ್ದೇ ಆದಲ್ಲಿ ಯುವಕರಿಗೆ ಉಜ್ವಲ ಭವಿಷ್ಯವಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಹೆಸರುವಾಸಿ ಘಟಾನುಘಟಿ ರಾಜಕಾರಣಿಗಳಿದ್ದರೂ ಮಧ್ಯ ಕರ್ನಾಟಕ ಅಭಿವೃದ್ಧಿ ಆಗಿದ್ದೆಷ್ಟು?
ಧಾರವಾಡದ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಆರೋಪಿ ಅಗಿರುವ ಕಾರಣ ಅವರು ಧಾರವಾಡ ಪ್ರವೇಶಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನಿರಾಕರಿಸಿದೆ. ಇದರಿಂದಾಗಿ ವಿನಯ್ ಕುಲಕರ್ಣಿ ಜಿಲ್ಲೆಯಿಂದ ಹೊರಗಿರುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಪರವಾಗಿ ಪತ್ನಿ ಶಿವಲೀಲಾ ಕುಲಕರ್ಣಿ ಮನೆಮನೆಗೆ ತೆರಳಿ ಅಬ್ಬರದ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕೇಂದ್ರದ ಯೋಜನೆಗಳಲ್ಲಿ ಮುಸಲ್ಮಾನರನ್ನು ಹೊರಗಿಟ್ಟಿದ್ದು ತೋರಿಸಿದರೆ ರಾಜಕೀಯ ನಿವೃತ್ತಿ: ರಾಜೀವ್ ಚಂದ್ರಶೇಖರ್ ಸವಾಲು