ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಇಂದು ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ. ಈ ಹಿನ್ನೆಲೆ ಕೋರ್ಟ್ ಸುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಧಾರವಾಡದಲ್ಲಿರುವ ಜಿಲ್ಲಾ ನ್ಯಾಯಾಲಯದ ಸುತ್ತ 3 ಕೆಎಸ್ಆರ್ಪಿ, 5 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. 1 ಅಗ್ನಿಶಾಮಕ ದಳದ ವಾಹನ, ಇಬ್ಬರು ಡಿಸಿಪಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ಮೂವರು ಡಿವೈಎಸ್ಪಿ, 10 ಇನ್ಸ್ಪೆಕ್ಟರ್, 15 ಪಿಎಸ್ಐಗಳನ್ನು ನಿಯೋಜಿಸಲಾಗಿದ್ದು, 130ಕ್ಕೂ ಹೆಚ್ಚು ಸಿಬ್ಬಂದಿಯನ್ನು ನ್ಯಾಯಾಲಯದ ಹೊರಭಾಗದಲ್ಲಿ ನಿಯೋಜಿಸಲಾಗಿದೆ.
ವಾಹನಗಳ ನಿಲುಗಡೆಗೆ ಅವಕಾಶ ನಿರಾಕರಿಸಲಾಗಿದೆ. ಪೊಲೀಸರಿಂದ ವಾಹನಗಳ ತೆರವು ಮಾಡಲಾಗುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಳ್ಳುವ ಸಾಧ್ಯತೆ ಇರುವ ಕಾರಣ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ.