ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಹೇಳಿದರು.
ನಗರದ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಎರಡು ಮೂರು ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಅಧಿಕಾರಿಗಳು ಕೇವಲ ಭರವಸೆ ಮೇಲೆ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಈ ಬಾರಿ ಬೇಡಿಕೆ ಈಡೇರಿಸುವವರೆಗೂ ಧರಣಿ ಮುಂದುವರೆಸುವುದಾಗಿ ತಿಳಿಸಿದರು.
ಗುತ್ತಿಗೆ ಪೌರ ಕಾರ್ಮಿಕರಿಗೆ ನೇರ ನೇಮಕಾತಿ, ನೇರ ವೇತನ ಪಾವತಿ ಈವರೆಗೂ ಅನುಷ್ಟಾನಗೊಂಡಿಲ್ಲ. ಕೋವಿಡ್ 19 ಸಂದರ್ಭದಲ್ಲಿ ತಮ್ಮ ಜೀವನ ಮುಡಿಪಿಟ್ಟು ಕರ್ತವ್ಯ ನಿರ್ವಹಿಸಿದ ಪೌರ ಕಾರ್ಮಿಕರು ಹಾಗೂ ವಾಹನ ಚಾಲಕರಿಗೆ ಸುರಕ್ಷಾ ಸಾಧನಗಳನ್ನು ನೀಡಿಲ್ಲ. ಪೌರ ಕಾರ್ಮಿಕರಿಗೆ ಬರಬೇಕಾದ 12 ಕೋಟಿ 21.70 ಲಕ್ಷ ಮಹಾನಗರ ಪಾಲಿಕೆ ಪಾವತಿಸಿಲ್ಲ ಎಂದು ದೂರಿದರು.
ಆಟೋ - ಟಿಪ್ಪರ್ ವಾಹನ ಚಾಲಕರು ಮೂರು ತಿಂಗಳು ವೇತನ ನೀಡಿಲ್ಲ ಎಂದು ಮನವಿ ಮಾಡಿಕೊಂಡಿದ್ದಕ್ಕೆ ಕೆಲಸದಿಂದ ತೆಗೆಯಲಾಗಿದೆ. ಅವರನ್ನು ಮರು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ವೇತನ ಹಾಗೂ ನೇರ ನೇಮಕಾತಿ ಕಾಯ್ದೆ ಉಲ್ಲಂಘನೆಯಾಗಿದೆ. ಕೆಲಸದಿಂದ ತೆಗೆದವರಿಗೆ ಎರಡು ತಿಂಗಳು ವೇತನ ನೀಡಿಲ್ಲ ಎಂದ ಅವರು, ಹಲವು ಬೇಡಿಕೆಯನ್ನು ಈಡೇರಿಸುವರೆಗೂ ಧರಣಿ ಮುಂದುವರೆಸುವುದಾಗಿ ತಿಳಿಸಿದರು.