ಧಾರವಾಡ: ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದ ಆರೋಗ್ಯ ಸಿಬ್ಬಂದಿ ಮುಂದೆ ಹೈಡ್ರಾಮಾ ಮಾಡಿ, ಅದರ ವಿಡಿಯೋ ಚಿತ್ರೀಕರಿಸಿ ತಾನೇ ವೈರಲ್ ಮಾಡಿದ್ದಾನೆ. ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದ ಆರೋಗ್ಯ ಸಿಬ್ಬಂದಿಯನ್ನು ಪರದಾಡಿಸಿದ ಈತ, ಈಗ ಹುಷಾರಾಗಿ ಬಂದ ಬಳಿಕ ತನ್ನ ಹುಚ್ಚಾಟದ ವಿಡಿಯೋಗಳನ್ನು ಒಂದೊದಾಗಿಯೇ ಹರಿಬಿಡ್ತಿದ್ದಾನೆ.
ಧಾರವಾಡ ತಾಲೂಕು ತಡಕೋಡ ಗ್ರಾಮದ ವ್ಯಕ್ತಿ ತನ್ನ ಹುಚ್ಚಾಟದ ವಿಡಿಯೋಗಳನ್ನು ತಾನೇ ವೈರಲ್ ಮಾಡ್ತಿದ್ದಾನೆ. ಈತನಿಗೆ ಕೋವಿಡ್ ಸೋಂಕು ದೃಢಪಟ್ಟಾಗ ಆರೋಗ್ಯ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಆ ವೇಳೆ ಈತ "ನನ್ನಿಂದ ಯಾರಿಗೂ ಸೋಂಕು ಹರಡುವುದು ಬೇಡ. ನಿಮ್ಮದು ಯಾರದ್ದೂ ತಪ್ಪಿಲ್ಲ. ನನ್ನ ಸಾವಿಗೆ ನಾನೇ ಕಾರಣ" ಎಂದು ನೇಣು ಹಾಕಿಕೊಳ್ಳುವ ನಾಟಕ ಮಾಡಿದ್ದ.
ತನ್ನ ಹುಚ್ಚಾಟದ ವಿಡಿಯೋ ಸೆರೆ ಹಿಡಿದಿದ್ದ ಈತ, ಈಗ ಅದನ್ನು ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋದಲ್ಲಿ ಆರೋಗ್ಯ ಸಿಬ್ಬಂದಿ ಸೋಂಕಿತನ ಮನವೊಲಿಸುವುದನ್ನು ಕಾಣಬಹುದು. ಅದೇ ರೀತಿ ಇನ್ನೊಂದು ವಿಡಿಯೋವನ್ನು ಆ್ಯಂಬುಲೆನ್ಸ್ ಒಳಗಡೆಯಿಂದ ಮಾಡಿದ್ದಾನೆ. ಅದರಲ್ಲಿ, "ನನ್ನನ್ನು ಕೊಲ್ಲಲು ಕರೆದುಕೊಂಡು ಹೋಗ್ತಿದ್ದಾರೆ. ನಾನು ಆ್ಯಂಬುಲೆನ್ಸ್ ಒಳಗಡೆ ಇದ್ದೀನಿ" ಎಂದು ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದಾನೆ. ಅದನ್ನೂ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಕಳೆದ ಹದಿನೈದು ದಿನಗಳಲ್ಲಿ ಈ ಆಸಾಮಿ 10ಕ್ಕೂ ಅಧಿಕ ವಿಡಿಯೋಗಳನ್ನು ಹರಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಓದಿ : Black Fungus: ಕಲಬುರಗಿಯಲ್ಲಿ ಕೊರೊನಾ ಕಮ್ಮಿಯಾಗುತ್ತಲೇ ಕರಿ ಮಾರಿ ಕಾಟ ಹೆಚ್ಚಳ!