ಹುಬ್ಬಳ್ಳಿ: ಕಾಂಗ್ರೆಸ್ ಪಾರ್ಟಿಯಲ್ಲಿ ಎಲ್ಲವೂ ಸರಿಯಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಆರಂಭವಾಗಿದೆ. ಬಿ ಆರ್ ಪಾಟಿಲ್, ರಾಯರೆಡ್ಡಿ, ಸತೀಶ್ ಜಾರಕಿಹೊಳಿ ಗುಂಪುಗಾರಿಕೆ ಈ ಎಲ್ಲಾ ಸಂಗತಿಗಳನ್ನು ನೋಡಿದ್ರೆ ರಾಷ್ಟ್ರೀಯ ನಾಯಕತ್ವದ ಹೆದರಿಕೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭಿನ್ನಮತ ಸರಿಮಾಡುವ, ಸಂಭಾಳಿಸುವ ನೇತೃತ್ವ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಜಗಳ ಅತಿರೇಕಕ್ಕೆ ಹೋಗಿದೆ. ಇದು ಆಡಳಿತದ ಮೇಲೆ ಪರಿಣಾಮವನ್ನು ತೀವ್ರವಾಗಿ ಬೀರಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಗುಂಪುಗಳ ಮಧ್ಯೆ ಹೊಂದಾಣಿಕೆ ಇಲ್ಲ. ಪರಿಸ್ಥಿತಿ ಅಯೋಮಯವಾಗಿದೆ. ಜನರಿಗೆ ಬರೀ ಇವರ ಜಗಳ ನೋಡುವುದಾಗಿದೆ. ಯಾರು ಮತ್ತೆ ಮುಖ್ಯಮಂತ್ರಿ ಆಗಬೇಕು, ಸಿದ್ದರಾಮಯ್ಯ ಅವರನ್ನು ಯಾವಾಗ ಕೆಳಗೆ ಇಳಿಸಬೇಕು ಎಂಬ ಚರ್ಚೆ ಜೋರಾಗಿದೆ. ಸಂಸದ ಶಶಿ ತರೂರ್ ಸಭೆಯಲ್ಲಿಯೂ ಸಹ ಸಿಎಂ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಅವರು ಅದಕ್ಕೆ ಉತ್ತರ ನೀಡಿಲ್ಲ ಎಂದು ಹೇಳಿದ್ದಾರೆ.
ಸ್ಮಾರ್ಟ್ ಸಿಟಿಗೆ ಹಣ ನೀಡದ ರಾಜ್ಯ ಸರ್ಕಾರ: ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ನಿಂತಿದೆ. ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿಲ್ಲ. ಮೇಲಿಂದ ಹೇಳಿದ್ದಾರೆ ಅದಕ್ಕೆ ಪೆಂಡಿಂಗ್ ಅಂತ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಮೇಲಿಂದ ಅಂದ್ರೆ ಯಾರು, ಯಾಕೆ ದುಡ್ಡು ಕೊಡುತ್ತಿಲ್ಲ. ಪರಿಶೀಲನೆ ಮಾಡಿ ಗುತ್ತಿಗೆದಾರಿಗೆ ಹಣ ನೀಡಲಿ ಎಂದು ಜೋಶಿ ಒತ್ತಾಯಿಸಿದರು.
ಭ್ರಷ್ಟಾಚಾರ ತಾಂಡವ: ಆರು ತಿಂಗಳಲ್ಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿಗೆ 40% ಅಂತಿದ್ದರೂ ಆದರೆ ಕಾಂಗ್ರೆಸ್ ಪರಿಸ್ಥಿತಿ ಬರೀ ಆರು ತಿಂಗಳಲ್ಲಿ ಭೀಕರವಾಗಿದೆ. ನೆಲಕಚ್ಚುವ ಪರಿಸ್ಥಿತಿ ತಲುಪಲಿದೆ. ಡಿಕೆ ಶಿವಕುಮಾರ್ ಮುನ್ನಡೆ ಅಥವಾ ಹಿನ್ನಡೆ ಅದು ಅವರಿಗೆ ಬಿಟ್ಟ ವಿಚಾರ. ಇದರ ಅರ್ಥ ಕೋರ್ಟ್ ಒಪ್ಪಿದೆ ಅಂತಲ್ಲಾ. ಆದರೆ ತನಿಖೆ ಮುಂದುವರೆಯಲಿದೆ ಎಂದರು.
ಬೆಳೆ ವಿಮೆ ಏಜೆನ್ಸಿ ನಿರ್ಧರಿಸುವುದು ರಾಜ್ಯ ಸರ್ಕಾರ: ಬೆಳೆ ವಿಮೆ ಭಾರತ ಸರ್ಕಾರದ್ದು. ಆದರೆ ಬೆಳೆ ವಿಮೆ ಏಜೆನ್ಸಿ, ಪರಿಹಾರದ ಪ್ರಮಾಣ, ಎಲ್ಲವನ್ನೂ ನಿರ್ಧಾರ ಮಾಡುವುದು ರಾಜ್ಯ ಸರ್ಕಾರ. ಹೀಗಾಗಿ ತಪ್ಪಾಗಿದೆ ಅದನ್ನು ಮರುಪರಿಶೀಲನೆ ಮಾಡುತ್ತೇವೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಬಗ್ಗೆ ಮೊದಲಿನಿಂದಲೂ ಚಿಂತನೆಯಿದೆ. ಈಗ 324 ಕೋಟಿ ರೂ. ಯೋಜನೆಯ ಪ್ಲಾನ್ ಸಿದ್ಧವಾಗಿದೆ ಇದಕ್ಕೆ ಅನುಮೋದನೆ ಪಡೆದು ಟೆಂಡರ್ ಕರೆಯಲಾಗುತ್ತದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.
ಇದನ್ನೂಓದಿ:ಕೇಂದ್ರ ಸರ್ಕಾರದಿಂದ ಸಿಬಿಐ, ಇಡಿ, ತೆರಿಗೆ ಇಲಾಖೆಗಳ ದುರುಪಯೋಗ: ಶಶಿ ತರೂರ್