ಹುಬ್ಬಳ್ಳಿ: ಬಿಜೆಪಿ - ಜೆಡಿಎಸ್ ಮೈತ್ರಿ ಇನ್ನೂ ಫೈನಲ್ ಆಗಿಲ್ಲ. ಅದರ ಬಗ್ಗೆ ನನಗೆ ಸಂಪೂರ್ಣವಾದ ಮಾಹಿತಿ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೈತ್ರಿ ಅನಿವಾರ್ಯ ಎಂದು ಸ್ಥಳೀಯವಾಗಿ ಹೇಳಿರಬಹುದು. ನಾನು ಕೇಂದ್ರದಲ್ಲಿ ಮಂತ್ರಿಯಾಗಿ ಮೈತ್ರಿ ವಿಚಾರವಾಗಿ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಖಾಸಗಿ ಬಸ್ ಮಾಲೀಕರ ಸಂಕಷ್ಟದ ಬಗ್ಗೆ ಮಾತನಾಡಿದ ಅವರು, ಖಾಸಗಿ ಬಸ್ ಮಾಲೀಕರ ತೊಂದರೆ ನಿವಾರಿಸುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ಶಕ್ತಿ ಯೋಜನೆ ವಿರೋಧಿಸಿ ಖಾಸಗಿ ವಾಹನ ಬಂದ್ ಮಾಡಲಾಗಿದ್ದು, ಖಾಸಗಿ ಬಸ್ನವರಿಗೆ ತೊಂದರೆ ಆಗಿರುವುದು ನಿಜ. ಬಡ ಜನ ಇರುವುದರಿಂದ ಸರ್ಕಾರ ಈ ಬಗ್ಗೆ ಗಮನ ಕೊಡಬೇಕು. ರಾಜ್ಯ ಸಾರಿಗೆ ಕೂಡ ನಷ್ಟದಲ್ಲಿದೆ. ಅದರ ಬಗ್ಗೆಯೂ ಸರ್ಕಾರ ಗಮನ ಕೊಡಬೇಕು. ಉಚಿತ ಕೊಡುತ್ತಿದ್ದೇವೆ ಎಂದು ಮನಬಂದಂತೆ ನಡೆದುಕೊಳುತ್ತಿದ್ದಾರೆ ಇದು ಸರಿ ಅಲ್ಲ ಎಂದು ಹೇಳಿದರು.
ಜಿ-20 ಶೃಂಗಸಭೆ ಅಚ್ಚುಕಟ್ಟಾಗಿ ನಡೆದಿದೆ: ಇನ್ನು ಜಿ20 ಭಾರತದ 75 ವರ್ಷದ ಇತಿಹಾಸದಲ್ಲಿ ಬಾರಿ ದೊಡ್ಡ ಮೈಲಿಗಲ್ಲಾಗಿದ್ದು, ಮುಖ್ಯವಾಗಿ ಭಿನ್ನಾಭಿಪ್ರಾಯ ಬರದಂತೆ ತೀರ್ಮಾನ ಮಾಡಿದ್ದೆ ಬಹುದೊಡ್ಡ ಸಾಧನೆ. ಭಾರತ ನೇತೃತ್ವವನ್ನು ಇತರ ದೇಶ ಒಪ್ಪುತ್ತಿದೆ ಎನ್ನುವುದರ ಸ್ಪಷ್ಟ ಸಂಕೇತವಾಗಿದೆ. ಆಫ್ರಿಕನ್ ಒಕ್ಕೂಟ ಒಗ್ಗೂಡಿಸಲು ಭಾರತದ ಪ್ರಪೋಸಲ್ ಬಂದಾಗ ಇದನ್ನು ಸ್ವೀಕಾರ ಮಾಡಿದ್ದಾರೆ. ಮಧ್ಯಪ್ರಾಚ್ಯ ಹೊಸ ಆರ್ಥಿಕ ಕಾರಿಡಾರ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿವೆ. ಭಾರತದ ಎಲ್ಲಾ ಸಲಹೆಗಳನ್ನು ಮಾನ್ಯ ಮಾಡಿದ್ದಾರೆ. ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ ಎಂದರು.
ಆದರೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಜಯರಾಮ್ ರಮೇಶ್ ಅವರಿಗೆ ಎಂತಹ ದಾರಿದ್ರ್ಯ ಬಂದಿದೆ ಎಂದರೆ, ಮಳೆ ನೀರು ನಿಂತಿರುವುದನ್ನು ಟ್ವೀಟ್ ಮಾಡುತ್ತಾರೆ. ಇಡೀ ಜಗತ್ತು ಭಾರತವನ್ನು ಹೊಗಳುತ್ತದೆ. ಆದರೆ ಕಾಂಗ್ರೆಸ್ ಮಾತ್ರ ತೆಗಳುತ್ತದೆ. ಇದು ಮಾನಸಿಕ ರೋಗ. ದೇಶಕ್ಕೆ ಒಳ್ಳೆಯದಾದರೆ ಅದನ್ನು ಸಹಿಸೋಕೆ ಆಗದ ಸ್ಥಿತಿಗೆ ಕಾಂಗ್ರೆಸ್ನವರು ಬಂದು ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರೋಧ ಮಾಡುವ ಭರದಲ್ಲಿ ದೇಶವನ್ನೇ ವಿರೋಧ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ - ಜಿ ಟಿ ದೇವೇಗೌಡ: ನೆನ್ನೆ(ಭಾನುವಾರ) ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಮಾತನಾಡಿ, ಲೋಕಸಭೆ ಚುನಾವಣೆಯ ಮಾತ್ರವಲ್ಲ. ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಲಿದ್ದು, ಮೈತ್ರಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲಿದೆ ಎಂದು ಹೇಳಿದ್ದರು.