ಹುಬ್ಬಳ್ಳಿ : ಸಿದ್ದರಾಮಯ್ಯ ಸಿಎಂ ಹಾಗೂ ದೀರ್ಘಾವಧಿಯ ಹಣಕಾಸು ಸಚಿವರಾಗಿದ್ದವರು. ಅವರು ಈ ರೀತಿ ಮಾತನಾಡಬಾಡರದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿದ್ದು ಮಧ್ಯಾಂತರ ಪರಿಹಾರ. ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ, 1,200 ಕೋಟಿ ರೂ ಪರಿಹಾರ ನೀಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ನಗರದಲ್ಲಿ ಬ್ಯಾಂಕ್ಗಳ ವತಿಯಿಂದ ನಡೆದ ಸಾಲ ಮೇಳದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹೇಳುತ್ತಿರೋದು ಎಲ್ಲವೂ ಬೋಗಸ್. ಕಳೆದ ಐದು ವರ್ಷಗಳ ಅವಧಿಯಲ್ಲಿ ನಮ್ಮ ಸರ್ಕಾರ ಹೆಚ್ಚು ಹಣ ನೀಡಿದೆ. ಯುಪಿಎ ಸರ್ಕಾರದ ಹತ್ತು ವರ್ಷದ ಅವಧಿಗಿಂತಲೂ ನಮ್ಮ ಸರ್ಕಾರ ಹೆಚ್ಚು ಹಣ ನೀಡಿದೆ. ಹೀಗಾಗಿ ಯುಪಿಎ ಸರ್ಕಾರ ಹೆಚ್ಚು ಪರಿಹಾರ ನೀಡಿತ್ತು ಎಂಬ ಕೈ ನಾಯಕರ ಹೇಳಿಕೆ ಸುಳ್ಳು. ಹತ್ತು ವರ್ಷಗಳಲ್ಲಿ ಯುಪಿಎ ಸರ್ಕಾರ ನೀಡಿದ್ದು, ಬರೀ 907 ಕೋಟಿ ರೂ. ಹಣ. ಕೇಳಿದ್ದು 15,929 ಕೋಟಿ ರೂ. ನಾವು ಕೇವಲ ಐದು ವರ್ಷದಲ್ಲಿ 6 ಸಾವಿರ ಕೋಟಿ ರೂ. ನೀಡಿದ್ದೇವೆ. ರಾಜಕಾರಣಕ್ಕಾಗಿ ಮಾತನಾಡೋದು ಬೇರೆ. ಚುನಾವಣೆ ದೂರ ಇದೆ. ಆವಾಗ ರಾಜಕೀಯ ಮಾತನಾಡೋಣ ಎಂದು ಕೈ ನಾಯಕರ ವಿರುದ್ಧ ಪ್ರಹ್ಲಾದ ಜೋಶಿ ಕಿಡಿಕಾರಿದರು.
ಇದು ನಾವು ಕೇಳಿದ ಆಧಾರದ ಮೇಲೆ ನೀಡಿದ್ದಾರೆ. ಮುಂದೆಯೂ ಬರುತ್ತೆ. ಸುಮ್ಮನೆ ಆರೋಪ ಮಾಡೋದು ಸರಿಯಲ್ಲ. ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಕ್ಕೂ, ಪರಿಹಾರಕ್ಕೂ ಯಾವುದೇ ಸಂಬಂಧವಿಲ್ಲ.
ಯತ್ನಾಳ್ ಅವರು ಬಿಎಸ್ ವೈ ಯವರನ್ನ ಕೇಂದ್ರ ನಾಯಕರು ಕಡೆಗಣಿಸುತ್ತಿದ್ದಾರೆ ಅಂತ ಹೇಳಿದ್ದಕ್ಕೆ ನೋಟಿಸ್ ನೀಡಿದ್ದಾರೆ. ಅವರು ಸೂಕ್ತ ಉತ್ತರ ನೀಡುತ್ತಾರೆ ಎಂದು ಸ್ಪಷ್ಟನೆ ನೀಡಿದರು.