ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ಹೊಸ ಕಾರ್ಯಕ್ರಮಗಳ ಮೂಲಕ ನಮಗೆ ಪ್ರೇರಣೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡಲು ಬಣ್ಣದರ್ಪಣೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನಾಳೆ ಕುಂದಗೋಳದ ಹರಭಟ ಶಾಲೆಯ ಮೈದಾನದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡುತ್ತಾ, ಸರ್ಕಾರಿ ಶಾಲಾ, ಕಾಲೇಜುಗಳಿಗೆ ಬಣ್ಣದರ್ಪಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಕೆಲವರು ಶಾಲೆ ಹಾಳಾಗಿದೆ ಅಂತ, ಕೆಲವರು ಶಾಲೆ ಕೆಟ್ಟಿದೆ ಅಂತಾ ಬರುತ್ತಿದ್ದಾರೆ. ಇಂತಹ ಶಾಲೆಗಳಿಗೆ ಹೊಸ ಸ್ವರೂಪ ನೀಡಲು ಹೊಸ ಯೋಜನೆ ರೂಪಿಸಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ 1,177 ಶಾಲೆಗಳಿಗೆ ಬಣ್ಣ ನೀಡಲಾಗುತ್ತದೆ. ನಮ್ಮ ಸರ್ಕಾರಿ ಶಾಲಾ ಕಾಲೇಜುಗಳು ಯಾವುದೇ ರೀತಿ ಸುಣ್ಣ ಬಣ್ಣ ಕಳೆದುಕೊಂಡು ಕಳೆಗುಂದಬಾರದು. ಈ ಹಿನ್ನೆಲೆಯಲ್ಲಿ ಬಣ್ಣದರ್ಪಣೆ ಮಾಡಲಾಗುತ್ತದೆ ಎಂದರು.
ಕ್ಷಮತಾ ಸೇವಾ ಸಂಸ್ಥೆಯಿಂದ ಉಚಿತ ಬಣ್ಣ: ಸರ್ಕಾರಿ ಶಾಲೆಗಳಿಗೆ ಹೊಸ ಮೆರುಗು ಕೊಡಬೇಕು ಎಂಬ ನಿಟ್ಟಿನಲ್ಲಿ ಹೊಸ ಆಲೋಚನೆ ಮಾಡಿದ್ದು, ಭಾರಿ ಮಳೆ ಮತ್ತು ತೇವಾಂಶದಿಂದ ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳ ಗೋಡೆಗಳು ಕಳೆಗುಂದಿವೆ. ಕ್ಷಮತಾ ಸೇವಾ ಸಂಸ್ಥೆ ಉಚಿತವಾಗಿ ಬಣ್ಣ ವಿತರಣೆ ಮಾಡಲು ಮುಂದಾಗಿದ್ದು, ಹಳೆಯ ವಿದ್ಯಾರ್ಥಿಗಳು, ದಾನಿಗಳು ಈ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.
ಕುಂದಗೋಳದಲ್ಲಿ ಅಧಿಕೃತ ಚಾಲನೆ: ಆಫ್ಲೈನ್ ನೋಂದಣಿ ಕೂಡ ನಡೆಯುತ್ತಿದ್ದು, ನಾಳೆ ಕುಂದಗೋಳದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಅವರಿಂದ ಚಾಲನೆ ನೀಡುವ ಮೂಲಕ ಹೊಸ ಅಭಿಯಾನಕ್ಕೆ ಮುನ್ನುಡಿ ಬರೆಯಲಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಧಾರವಾಡದಲ್ಲಿ ಕೋಟಿ ಕಂಠ ಗಾಯನ: ಹಾಡಿಗೆ ಹೆಜ್ಜೆ ಹಾಕಿದ ಸಚಿವ ಜೋಶಿ