ಹುಬ್ಬಳ್ಳಿ : ವಿದ್ಯಾರ್ಥಿ ಸೋಗಿನಲ್ಲಿ ಧಾರವಾಡದಲ್ಲಿ ವಾಸವಾಗಿದ್ದ ಉಗಾಂಡ ಮೂಲದ ವ್ಯಕ್ತಿಯನ್ನು ಬಂಧಿಸುವಲ್ಲಿ ಸೈಬರ್ ಕ್ರೈಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಉಗಾಂಡ ದೇಶದ ದೇವಾಸ್ ಎಂಬಾತ ಧಾರವಾಡದ ನರ್ಸಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ 2018ರಲ್ಲಿ ಕಲಘಟಗಿ ಮೂಲದ ಯುವಕನೊಬ್ಬನಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದ. ನಿರಂತರವಾಗಿ ಸಂಪರ್ಕದಲ್ಲಿದ್ದು ಸ್ನೇಹ, ನಂಬಿಕೆ ಗಳಿಸಿಕೊಂಡಿದ್ದ.
2019ರ ಮೇ 3ರಂದು ದೇವಾಸ್ ಇನ್‌ಸ್ಟಾಗ್ರಾಮ್ ಸ್ನೇಹಿತನಿಗೆ ಕರೆ ಮಾಡಿದ್ದ. ತಾನು ಮತ್ತು ತನ್ನ ಗೆಳೆಯ ಎಂ ಆರ್ ಯೂಪ ಇಬ್ಬರೂ ಎನ್‌ಆರ್‌ಐ (ಅನಿವಾಸಿ ಭಾರತೀಯರು) ಇದ್ದು, ನಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿನವರಿಗೆ ಕಾಲೇಜು ಶುಲ್ಕ ಮತ್ತು ಪರೀಕ್ಷೆ ಶುಲ್ಕವನ್ನು ಬ್ಯಾಂಕ್ ಖಾತೆಯ ಮುಖಾಂತರವೇ ವರ್ಗಾವಣೆ ಮಾಡಬೇಕಿದೆ. ಹಾಗಾಗಿ, ಸ್ಥಳೀಯವಾಗಿ ಬ್ಯಾಂಕ್ ಖಾತೆ ತೆರೆದು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ.
ಇವರಿಗೆ ಸಹಾಯ ಮಾಡಲೆಂದು ಯುವಕ ತನ್ನ ಹಾಗೂ ತನ್ನ ಸಹೋದರನ ಹೆಸರಲ್ಲಿ ಧಾರವಾಡದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು. ಖಾತೆಗಳಿಗೆ ದೇವಾಸ್ ನೀಡಿದ್ದ ಮೊಬೈಲ್ ಫೋನ್ ನಂಬರ್ಗಳನ್ನೇ ಲಿಂಕ್ ಮಾಡಿಸಿದ್ದರು. ಹೀಗೆ ದೇವಾಸ್ ಸ್ಥಳೀಯ ಯುವಕನ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಅನಧಿಕೃತವಾಗಿ ಹಣ ವರ್ಗಾವಣೆ ಮಾಡಲು ದುರ್ಬಳಕೆ ಮಾಡಿಕೊಂಡಿದ್ದ ಎಂದು ಕಲಘಟಗಿ ಮೂಲದ ಯುವಕ ಫೆಬ್ರವರಿ 28ರಂದು ದೂರು ನೀಡಿದ್ದರು.
ಆ ಸ್ಥಳೀಯ ಯುವಕರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಸಿ ಅನಧಿಕೃತವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪದಡಿ ಉಗಾಂಡ ಮೂಲದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಈತ ಇದೇ ರೀತಿ ಹಲವು ಸ್ಥಳೀಯರ ಸ್ನೇಹ ಗಳಿಸಿ, ಅವರ ಹೆಸರಲ್ಲಿ ಹಲವು ಬ್ಯಾಂಕ್ ಖಾತೆ ತೆರೆದು ವಂಚಿಸಿದ್ದಾನೆ ಎನ್ನಲಾಗಿದೆ. ಈತನ ಹಿಂದೆ ಬೃಹತ್ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.