ಧಾರವಾಡ: ರಸ್ತೆ ಡಿವೈಡರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಭವಿಸಿದೆ. ಕಳೆದ ತಡರಾತ್ರಿ ಧಾರವಾಡದಿಂದ ಊಟಕ್ಕೆ ಢಾಬಾಗೆ ಹೋಗಿದ್ದ ಯುವಕರು ತಮ್ಮ ಕಾರಿನಲ್ಲಿ ವಾಪಸ್ ಬರುವಾಗ ಹೆದ್ದಾರಿ ಡಿವೈಡರ್ಗೆ ಕಾರು ಡಿಕ್ಕಿ ಹೊಡೆದಿದೆ.
ಸ್ಥಳದಲ್ಲಿ ಓರ್ವ ಸಾವನ್ನಪ್ಪಿದ್ದರೆ, ಮತ್ತೋರ್ವ ಚಿಕಿತ್ಸೆ ಫಲಿಸದೇ ಧಾರವಾಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ವಿನಯ ಹಿರೇಮಠ (28) ಹಾಗೂ ಸಂದೀಪ್ (29) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಮತ್ತೋರ್ವ ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿದ್ದೆ ಮಂಪರಲ್ಲಿ ರಸ್ತೆ ವಿಭಜಕ್ಕೆ ಕಾರು ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳು ಸಾವು: ಬೆಂಗಳೂರಿನಲ್ಲಿ ಭಾನುವಾರ ಘಟನೆ ನಡೆದಿತ್ತು. ಕಾರಿನಲ್ಲಿ ನಂದಿ ಬೆಟ್ಟಕ್ಕೆ ಖಾಸಗಿ ಕಾಲೇಜಿನ ಒಟ್ಟು ಐವರು ವಿದ್ಯಾರ್ಥಿಗಳು ಟ್ರಿಪ್ ಹೊರಟಿದ್ದರು. ಆದರೆ ಬೆಳಗಿನ ಜಾವ ಹೋಗುವುದು ಬೇಡವೆಂದು ವಾಪಸ್ ಬರುವಾಗ ನಿದ್ದೆ ಮಂಪರಿನಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿಯಾಗಿದೆ. ಪರಿಣಾಮ ವಿದ್ಯಾರ್ಥಿ ಕಾರ್ತಿಕ್ ಜೈನ್ ಎನ್ನುವಾತ ಸ್ಥಳದಲ್ಲೇ ಮೃತಪಟ್ಟರೆ, ಆದರ್ಶ್ ಕುಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಕಾರಿನಲ್ಲಿದ್ದ ಉಳಿದ ಮೂವರು ವಿದ್ಯಾರ್ಥಿಗಳಿಗೂ ತೀವ್ರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ರಸ್ತೆ ಅಪಘಾತ : ಭಾನುವಾರ ಚಿತ್ರದುರ್ಗ ಜಿಲ್ಲೆಯ ಮಲ್ಲಾಪುರ ಗ್ರಾಮದ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದರು. ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಅಪಘಾತ: ಬೈಕ್ ಹಾಗೂ ಪಿಕಪ್ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮದ ಬಳಿ ಆ.12 ರಂದು ನಡೆದಿತ್ತು. ಈಶ್ವರ್ (16) ಯಶ್ವಂತ್ (17) ಮೃತ ವಿದ್ಯಾರ್ಥಿಗಳು. ರಾಮು ಎಂಬವರ ಸ್ಥಿತಿ ಗಂಭೀರವಾಗಿದೆ. ಈ ವಿದ್ಯಾರ್ಥಿಗಳು ಆಂಧ್ರಪ್ರದೇಶದ ರೊದ್ದಂ ಮಂಡಲದ ಚಿನ್ನಿಕೊಡಿಪಲ್ಲಿ ಗ್ರಾಮದವರಾಗಿದ್ದಾರೆ. ಶನಿವಾರವಾದ ಹಿನ್ನೆಲೆ ಈ ಮೂವರು ವಿದ್ಯಾರ್ಥಿಗಳು ಪಾವಗಡದ ಶನಿ ಮಹಾತ್ಮ ದೇವಸ್ಥಾನಕ್ಕೆ ಹೊರಟಿದ್ದರು. ಈ ವೇಳೆ ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮದ ಬಳಿ ಇವರ ಬೈಕ್ಗೆ ಪಿಕಪ್ ವಾಹನ ಡಿಕ್ಕಿಯಾಗಿದೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿದ್ದನು. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Bengaluru accident: ನಿದ್ದೆ ಮಂಪರಿನಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ; ಬೆಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು