ಹುಬ್ಬಳ್ಳಿ: ನಗರದಲ್ಲಿ ಎರಡು ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಪ್ರದೀಪ್ ಶೆಟ್ಟರ್ ಹಾಗೂ ಪೊಲೀಸ್ ಆಯುಕ್ತ ಆರ್.ದಿಲೀಪ್ ಗಾಳಿಪಟ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ಕ್ಷಮತಾ ಆಶ್ರಯದಲ್ಲಿ ನಗರದ ಹೊರವಲಯದ ಕುಸುಗಲ್ ರಸ್ತೆಯ ಬೃಹತ್ ಮೈದಾನದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ವಿಲಾಸ ನಾಯಕ್ ಸ್ಪೀಡ್ ಪೇಂಟಿಂಗ್ ಮೂಲಕ ಜನರ ಗಮನ ಸೆಳೆದರು.
ನಂತರ ಮಾತನಾಡಿದ ಹುಧಾ ಪೊಲೀಸ್ ಆಯುಕ್ತ ಆರ್.ದೀಲಿಪ್, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದ ಜಂಜಾಟದಲ್ಲಿ ಜನಪದ ಕಲೆಗಳಿಂದ ಜನರು ದೂರ ಉಳಿಯುತ್ತಿದ್ದಾರೆ. ಆರೋಗ್ಯಯುತ ಜೀವನಕ್ಕೆ ಕ್ರೀಡೆ ಅವಶ್ಯಕವಾಗಿದೆ. ಆಟಗಳಿಂದ ಸಾಮಾಜಿಕ ಜೀವನ ಸೃಷ್ಟಿಯಾಗುತ್ತದೆ. ಈ ಗಾಳಿಪಟ ಉತ್ಸವದಿಂದ ಮಕ್ಕಳಲ್ಲಿ ಗಾಳಿಪಟದ ಬಗ್ಗೆ ಅರಿವು ಮೂಡುತ್ತದೆ. ವಿಶೇಷ ಆಟಗಳು ವ್ಯಕ್ತಿಯ ಜೀವನಕ್ಕೆ ಸಾಮಾಜಿಕ ಭದ್ರತೆ ಹಾಗೂ ಸಾಮಾಜಿಕ ಜೀವನವನ್ನು ರೂಪಿಸುತ್ತವೆ ಎಂದರು.
ಉತ್ತಮ ಆರೋಗ್ಯದ ಪಾಲನೆಗೆ ಕ್ರೀಡೆಗಳು ಅವಶ್ಯಕವಾಗಿವೆ. ಆದರೆ ಪ್ರಸ್ತುತ ದಿನಗಳಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದ ವ್ಯಾಮೋಹದಿಂದ ಅಂಗಳದಲ್ಲಿ ಆಟವಾಡದೆ ಮೊಬೈಲ್ನಲ್ಲಿ ಆಟವಾಡುತ್ತಾ ಅಮೂಲ್ಯ ಜೀವನದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.