ಹುಬ್ಬಳ್ಳಿ: ಕೊರೊನಾ ಮಹಾಮಾರಿಯಿಂದ ಅದೆಷ್ಟೋ ಜನ ತಮ್ಮ ನೆಮ್ಮದಿಯ ಜೀವನವನ್ನೇ ಕಳೆದುಕೊಂಡಿದ್ದಾರೆ. ಅಲ್ಲದೇ ಸಾಕಷ್ಟು ಜನ ಉದ್ಯೋಗವನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ. ಈ ನಡುವೆ ಕಾಲೇಜಿಗೆ ಹೋಗಬೇಕಿದ್ದ ಇಬ್ಬರು ಯುವಕರು ಬಿರಿಯಾನಿ ಮಾಡುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಹೌದು, ಚೇತನ್ ಹಳ್ಳಿಕೇರಿ ಎಂಬ ಯುವಕನ ತಂದೆ ಗ್ಯಾರೇಜ್ ನಡೆಸುತ್ತಿದ್ದರು. ಆದ್ರೆ ಕೊರೊನಾ ಕಾರಣದಿಂದ ಗ್ರಾಹಕರು ಕಡಿಮೆಯಾಗಿ ಗ್ಯಾರೇಜ್ ಮುಚ್ಚಿದ್ದಾರೆ. ಹೀಗಾಗಿ ಕುಟುಂಬ ನಿರ್ವಹಣೆಗಾಗಿ ಚೇತನ್ ತನ್ನ ಸ್ನೇಹಿತ ಸೋಯೆಬ್ ಶೇಖ್ ಜೊತೆ ಸೇರಿ ಹೋಮ್ ಮೇಡ್ ಬಿರಿಯಾನಿ ವ್ಯಾಪಾರ ಆರಂಭಿಸಿದ್ದಾರೆ.
ಬಿರಿಯಾನಿ ತಯಾರಿಸಲು ಮುಂದಾದ ಯುವಕ ತಮ್ಮ ಹತ್ತಿರವಿದ್ದ ಕಾರನ್ನೇ ಬಳಸಿಕೊಂಡು ಮನೆಯಲ್ಲಿಯೇ ಬಿರಿಯಾನಿ ಪ್ಯಾಕೆಟ್ ಗಳನ್ನು ಸಿದ್ದಪಡಿಸುವ ಇವರು, ನಂತರ ದೇಶಪಾಂಡೆ ನಗರ ಸೇರಿದಂತೆ ಹಲವು ಕಡೆ ವ್ಯಾಪಾರ ಮಾಡುತ್ತಾರೆ. ಎಗ್ ಬಿರಿಯಾನಿ 49 ರೂ. ಚಿಕನ್ ಬಿರಿಯಾನಿ 59 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ನಿತ್ಯ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ 20ಕ್ಕೂ ಹೆಚ್ಚು ಪ್ಯಾಕೆಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ಚೇತನ್, ಆರ್ ಎನ್ ಶೆಟ್ಟಿ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ಬರೆದಿದ್ರೆ, ಸೋಯೆಬ್ ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ನಿಲ್ಲಿಸಿದ್ದಾನೆ. ಕೊರೊನಾ ಸಂಕಷ್ಟ ಕಾಲದಲ್ಲಿ ಈ ಸ್ನೇಹಿತರು ಸ್ವ ಉದ್ಯೋಗ ಸೃಷ್ಟಿಸಿಕೊಳ್ಳುವ ಮೂಲಕ ಕುಟುಂಬ ನಿರ್ವಹಣೆ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.