ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮುಸ್ಲಿಂ, ಹಿಂದೂ, ಸಿಖ್ ಸಮುದಾಯದ ಸಹಯೋಗದಲ್ಲಿಂದು ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಯಿತು.
ಮೆರವಣಿಗೆಯು ನಗರದ ಗಣೇಶ ಪೇಟೆ ಮೂಲಕ ಪ್ರಾರಂಭಗೊಂಡು ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಅಂಬೇಡ್ಕರ್ ಪುತ್ಥಳಿಕೆಗೆ ಮಾಲಾರ್ಪಣೆ ಮಾಡುವ ಮೂಲಕ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಪಂಜಿನ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದು, ಹಿಂದೂ ಮುಸ್ಲಿಂ ಸಿಖ್ ಭಾಯಿ ಭಾಯಿ ಎಂದು ಘೋಷಣೆ ಕೂಗಿ ಸಿಎಎ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಿದ್ಧಾರೂಢ ಶಾಖಾಮಠದ ಸ್ವಾಮೀಜಿ, ಅಂಬೇಡ್ಕರ್ ಅವರು ಜಾರಿ ಮಾಡಿರುವ ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ದೇಶದಲ್ಲಿ ಕೋಮುವಾದ ಸೃಷ್ಟಿಸುವುದು ಸರಿಯಲ್ಲ. ನಾವೆಲ್ಲರೂ ಸರ್ವಧರ್ಮದವರು ಅಣ್ಣ ತಮ್ಮಂದಿರಂತೆ ಇದ್ದೇವೆ. ನಮ್ಮಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯಿಂದ ಒಡಕು ಹುಟ್ಟುವುದು ಬೇಡ ಎಂದರು. ದೇಶದಲ್ಲಿ ಅಲ್ಪಸಂಖ್ಯಾತರ ವಿರೋಧಿಯಾಗಿರುವ ಈ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.