ಹುಬ್ಬಳ್ಳಿ : ಸಾವಿನ ಹೆದ್ದಾರಿ ಎಂದೇ ಅಪಖ್ಯಾತಿ ಹೊಂದಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಷಟ್ಪಥ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಸಿರು ನಿಶಾನೆ ತೋರಿದೆ.
ನಾಲ್ಕು ವರ್ಷಗಳಲ್ಲಿ 89 ಜನರನ್ನ ಬಲಿ ತೆಗೆದುಕೊಂಡ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಈಗಲಾದ್ರೂ ಅಸ್ತು ಎಂದಿದ್ದು, ಅವಳಿ ನಗರದ ಜನರು ನಿಟ್ಟುಸಿರು ಬಿಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿ ನಿರ್ಮಾಣದ ಭೂಮಿಪೂಜೆಗೆ ಸಿದ್ದವಾಗಿದೆ. ಷಟ್ಪಥ ಎಕ್ಸ್‌ಪ್ರೆಸ್ ಹೈವೇ ಜೊತೆಗೆ ನಾಲ್ಕು ಪಥ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಫೆ.28ರಂದು(ನಾಳೆ) ಶಂಕುಸ್ಥಾಪನೆ ನೆರವೇರಲಿದೆ. ಒಟ್ಟು 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡುತ್ತಿದೆ.
ಹುಬ್ಬಳ್ಳಿ-ಧಾರವಾಡ ನಡುವೆ ಇರೋ ರಾಷ್ಟ್ರೀಯ ಹೆದ್ದಾರಿ ಪುಣೆ-ಬೆಂಗಳೂರು ಸಂಪರ್ಕ ಕಲ್ಪಿಸುತ್ತಿದೆ. ಆದರೆ, ಅವಳಿ ನಗರದ ಮಧ್ಯೆ ಕೇವಲ ದ್ವಿ-ಪಥವಿತ್ತು. ರಸ್ತೆ ಕಿರಿದಾಗಿದ್ದರಿಂದ ಬೈಪಾಸ್‌ನಲ್ಲಿ ಭೀಕರ ರಸ್ತೆ ಅಪಘಾತಗಳು ಹೆಚ್ಚಾಗಿದ್ದವು. ಸುಗಮ ರಸ್ತೆ ಸಂಚಾರಕ್ಕೂ ತೊಂದರೆಯಾಗಿತ್ತು.
ಕೇವಲ 30 ಕಿಲೋಮೀಟರ್ ಅಂತರವನ್ನು ದಾಟಲು ಗಂಟೆಗಟ್ಟಲೇ ಸಮಯ ಹಿಡಿಯುತ್ತಿತ್ತು. ಇದಲ್ಲದೆ ಕಳೆದ ವರ್ಷ ಜನವರಿಯ ಒಂದೇ ದಿನ 11 ಜನರನ್ನು ಬಲಿ ಪಡೆದಿತ್ತು. ಆ ದುರಂತಕ್ಕೆ ಪ್ರಧಾನಿಯೂ ಕಂಬನಿ ಮಿಡಿದಿದ್ದರು. 2018ರಿಂದ ಈವರೆಗೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ 528 ಅಪಘಾತಗಳು ಸಂಭವಿಸಿ, 89 ಜನ ಸಾವನ್ನಪ್ಪಿ, 542 ಜನ ಗಾಯಗೊಂಡಿದ್ದಾರೆ.
ಬಹುತೇಕ ಅಪಘಾತಗಳು ರಾತ್ರಿ ವೇಳೆಯಲ್ಲಿಯೇ ಸಂಭವಿಸಿದ್ದವು. ಓವರ್ ಟೇಕ್ ಮಾಡಲು ಹೋದ ಸಂದರ್ಭದ ಅಪಘಾತಗಳಿಂದ ಹೆಚ್ಚಿನ ಅನಾಹುತಗಳು ಸಂಭವಿಸಿದ್ದವು. ಒಂದರ್ಥದಲ್ಲಿ ಸಾವಿನ ಹೆದ್ದಾರಿ ಅಂತಲೇ ಇದು ಕುಖ್ಯಾತಿ ಪಡೆದಿತ್ತು.
ದ್ವಿಪಥ ರಸ್ತೆಯನ್ನು ಷಟ್ಪಥ ಮಾಡುವಂತೆ ವಿವಿಧ ಸಂಘಟನೆಗಳು ಹಲವಾರು ಬಾರಿ ಹೋರಾಟ ಮಾಡಿದ್ದವು. ಕೊನೆಗೂ ಕೇಂದ್ರ ಸರ್ಕಾರ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಫೆಬ್ರವರಿ 28ರಂದು ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಬೈಪಾಸ್ 31 ಕಿ.ಮೀ ರಸ್ತೆಯನ್ನು ಷಟ್ಪಥ ಎಕ್ಸ್‌ಪ್ರೆಸ್ ಹೈವೇ ಆಗಿ ಮಾರ್ಪಡಿಸಲು ಹಾಗೂ ನಾಲ್ಕು ಪಥದ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ : ವಿಧಾನಸೌಧಕ್ಕೆ ಏಣಿ ಹಾಕಿದ ಖಾಕಿ: ಕೊಳ್ಳೇಗಾಲ ಎಂಎಲ್ಎ ಸ್ಥಾನಕ್ಕೆ ಚಾಮರಾಜನಗರ ಸಿಪಿಐ ಸ್ಪರ್ಧೆ!?
ಆರು ಪಥದ ಎಕ್‌ಪ್ರೆಸ್ ರಸ್ತೆ ಹಾಗೂ ಸಮರ್ಪಕವಾಗಿ ಎರಡೂ ಬದಿಯಲ್ಲಿ ದ್ವಿಪಥದ ಸರ್ವೀಸ್ ರಸ್ತೆಯನ್ನು ನಿರ್ಮಿಸುತ್ತಿರೋದು ಜನರ ನೆಮ್ಮದಿಗೆ ಕಾರಣವಾಗಿದೆ. ಮುಖ್ಯವಾಗಿ ಈಗಿರುವ ಬೈಪಾಸ್‌ನ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈ ಟೋಲ್ ಕೆಲಗೇರಿ ಮತ್ತು ನರೇಂದ್ರ ಮಧ್ಯೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಟೋಲ್‌ನಿಂದ ವಿನಾಯಿತಿ ಸಿಕ್ಕಂತಾಗುತ್ತದೆ. ಈ ಬೈಪಾಸ್ ನಿರ್ಮಾಣದಿಂದ ನಗರ ಮಧ್ಯೆದೊಳಗಿನ ಸಂಚರಿಸುವ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ 31 ಕಿಲೋಮೀಟರ್ ಷಟ್ಪಥ ಮಾಡಲು ನಿರ್ಧರಿಸಲಾಗಿದೆ. ಗಬ್ಬೂರು ಕ್ರಾಸ್‌ನಿಂದ ನರೇಂದ್ರದವರೆಗಿನ ದ್ವಿಪಥ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬೈಪಾಸ್ ರಸ್ತೆಗೆ ಕಾಯಕಲ್ಪ ನೀಡೋಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಅವಳಿ ನಗರದ ಜನತೆಯ ಬಹುದಿನಗಳ ಕನಸು ನನಸಾಗಲಾರಂಭಿಸಿದೆ.