ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆ ಜಗಳ ತೆಗೆದು ಆಟೋ ಚಾಲಕನೊಬ್ಬನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ ಪ್ರಕರಣದ ಮೂವರು ಅಪರಾಧಿಗಳಿಗೆ ತಲಾ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 55,500 ರೂ. ದಂಡ ವಿಧಿಸಿ ಇಲ್ಲಿಯ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಇಮಾಮ್ ಮಕಾಂದಾರ, ರಬ್ಬಾಣಿ ಸವಣೂರು ಹಾಗೂ ಮಾಲೂಬ್ ಶಿಗ್ಗಾಂವ್ ಶಿಕ್ಷೆಗೆ ಒಳಗಾದವರು. ಕರಾಟೆ, ಕಿರಣ ಅಗಸರ ಹಾಗೂ ಸುನೀಲ ದಿಲವಾಲೆ ಅಕ್ಷಯ್ ಪಾರ್ಕ್‌ನ ರವಿ ನಗರ ರಸ್ತೆಗೆ ಎಗ್‌ರೈಸ್ ತಿನ್ನಲು ಹೋಗಿದ್ದರು. ಅಲ್ಲಿಂದ ಹೊರಟು ಬರುವಾಗ ಆಟೋದಲ್ಲಿ ಬಂದ ಇಮಾಮ್ ಮಕಾಂದಾರ, ರಬ್ಬಾಣಿ, ಸವಣೂರು ಹಾಗೂ ಮಾಲೂಟ ಶಿಗ್ಗಾಂವ್, ಕಿರಣ ಅಗಸರಿಗೆ ಆಟೋ ಡಿಕ್ಕಿ ಹೊಡೆಸಿ ಜಗಳ ತೆಗೆದಿದ್ದರು. ಬಳಿಕ ಅಟೋದಲ್ಲಿದ್ದ ಚಾಕುವಿನಿಂದ ಕಿರಣನ ಎಡ ಪಕ್ಕೆಗೆ ಚುಚ್ಚಿ ಪರಾರಿಯಾಗಿದ್ದರು.
ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್. ಗಂಗಾಧರ ಅವರು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿದರು. ಸಂತ್ರಸ್ತನ ಪರವಾಗಿ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಎಂ. ಅಂಚಟಗೇರಿ ವಾದ ಮಂಡಿಸಿದ್ದರು.