ಹುಬ್ಬಳ್ಳಿ: ಆನ್‌ಲೈನ್, ಎಸ್‌ಎಂಎಸ್ ಹಾಗೂ ಪತ್ರಿಕೆ ಮೂಲಕ ಜಾಹೀರಾತು ನೀಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಸಾರ್ವಜನಿಕರನ್ನ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಸೈಬರ್ ಕ್ರೈಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಳೇ ಹುಬ್ಬಳ್ಳಿಯ ನಿವಾಸಿಗಳಾದ ಬಸವರಾಜ ಲಮಾಣಿ, ಮಹಾಂತೇಶ ಚವ್ಹಾಣ್ ಮತ್ತು ಅರ್ಜುನ ಲಮಾಣಿ ಬಂಧಿತರು. ಇವರಿಂದ 30 ಗ್ರಾಂ ಬಂಗಾರ, 7 ಸ್ಮಾರ್ಟ್ ಫೋನ್, ಎಂಟು ಕೀ ಪ್ಯಾಡ್ ಮೊಬೈಲ್, ಎರಡು ದ್ವಿಚಕ್ರ ವಾಹನ ಹಾಗೂ 1.57 ಲಕ್ಷ ನಗದು ಸೇರಿದಂತೆ ಒಟ್ಟು 4.97 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಓದಿ : ಹುಬ್ಬಳ್ಳಿಯಲ್ಲಿ ಹೋಟೆಲ್ ಉದ್ಯಮಿ ಪುತ್ರಿ ಸೇರಿ ಇಬ್ಬರು ಡ್ರಗ್ಸ್ ಪೆಡ್ಲರ್ಗಳು ಅರೆಸ್ಟ್
ಘಟನೆ ಹಿನ್ನೆಲೆ: ಧಾರವಾಡದ ಉದ್ಯಮಿ ದ್ಯಾಮನಗೌಡ ಪಾಟೀಲ ಅವರು ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಸಾಲಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದರು. ಇವರ ಮಾಹಿತಿ ಪಡೆದ ವಂಚಕನೊಬ್ಬ, ಹೇಮಂತಕುಮಾರ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ, ಶೇ. 2ರ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಹೇಳಿದ್ದಾನೆ. ಸಾಲ ಮಂಜೂರಾತಿಗೆ ಒಪ್ಪಂದ ಪತ್ರ, ವಿಮೆ, ತೆರಿಗೆ ಎಂದು 40 ಸಾವಿರ ಶುಲ್ಕವಾಗುತ್ತದೆ ಎಂದು, ದ್ಯಾಮನಗೌಡ ಅವರಿಂದ 31ಸಾವಿರ ರೂಪಾಯಿಯನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.