ಹುಬ್ಬಳ್ಳಿ : ನಾವು ಮೋದಿಯವರಿಗೆ ಪ್ರಶ್ನೆ ಮಾಡಿದಕ್ಕೆ ಕೇಸ್ ಹಾಕಿದ್ದಾರೆ. ಇದು ಯಾವ ನ್ಯಾಯ, ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡೋದೆ ತಪ್ಪಾ ? ಎಂದು ನಗರದಲ್ಲಿಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪಾಟೀಲ್ ಸಿಟ್ಟು ಹೊರ ಹಾಕಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿಲ್ ಪಾಟೀಲ್ ರಾಜ್ಯಕ್ಕೆ ಚಂದ್ರಯಾನ ವೀಕ್ಷಣೆ ಮಾಡಲು ಬರುತ್ತೀರಿ, ಪ್ರವಾಹ ವೀಕ್ಷಣೆಗೆ ಯಾಕೆ ಬರಲಿಲ್ಲವೆಂದು ಕೇಳಿದ್ದು ತಪ್ಪೆ? ಈ ಕಾರಣಕ್ಕೆ ಅವರನ್ನು ಬಂಧಿಸಿರುವುದು ಸರ್ವಾಧಿಕಾರಿ ನೀತಿ ಎಂದರು. ನಮ್ಮ ಯುವ ಮುಖಂಡರು ಕಾನೂನು ಬದ್ದವಾಗಿಯೇ ಬ್ಯಾನರ್ ಹಾಕಿ ಜನರ ಧ್ವನಿಯಾಗಿ ಪ್ರಶ್ನೆ ಮಾಡಿದ್ದರು ಅದರಲ್ಲಿ ಏನು ತಪ್ಪಿದೆಯೆಂದು ಕೇಳಿದ್ದಾರೆ.
ಇಲ್ಲಿಯವರಗೂ ನೆರೆ ಪರಿಹಾರಕ್ಕೆ ಕೇಂದ್ರ ಒಂದೇ ಒಂದು ರೂಪಾಯಿ ನೀಡಿಲ್ಲ, ನರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸುವುದೇ ತಪ್ಪಾ. ಇದನ್ನು ಖಂಡಿಸಿ ನಾವು ಇನ್ನು ಬೃಹತ್ ಹೋರಾಟ ಮಾಡುತ್ತೇವೆ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ಯಾನರ್ ಅಳವಡಿಸುತ್ತೇವೆ, ಎಷ್ಟು ಕೇಸ್ ಹಾಕುತ್ತಾರೋ ಹಾಕಲಿ ಎಂದು ಸವಾಲು ಒಡ್ಡಿದರು.
ಸಂಜೆ ನಾಲ್ಕು ಗಂಟೆಗೆ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ರಜತ್ ಉಳ್ಳಾಗಡ್ಡಿಮಠ, ಶಹಜ್ವಾನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.