ಹುಬ್ಬಳ್ಳಿ : ರಾಜ್ಯ ಸರ್ಕಾರ ಕೋವಿಡ್ ತಾಂತ್ರಿಕ ತಜ್ಞರ ಸಲಹಾ ಸಮಿತಿ ಶಿಫಾರಸ್ಸಿನ ಮೇಲೆ ಕೋವಿಡ್ ಸರಪಳಿ ಮುರಿಯುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾದ ನೂತನ ಡಯಾಲಿಸಿಸ್ ಹಾಗೂ ಕಿಡ್ನಿ ಟ್ರಾನ್ಸ್ ಪ್ಲ್ಯಾಂಟ್ ಸೆಂಟರ್ ಘಟಕದ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಅಲ್ಲದೆ ನಮ್ಮಲ್ಲಿ ರೆಮ್ಡೆಸಿವಿರ್ ಹಾಗೂ ಆಮ್ಲಜನಕ ಕೊರತೆಯಂತಹ ಸಮಸ್ಯೆ ಇಲ್ಲ. ಕೋವಿಡ್ ಪ್ರಕರಣಗಳ ಸಂಖ್ಯೆ ನಿತ್ಯ ಹೆಚ್ಚಳವಾಗುತ್ತಿರುವುದರಿಂದ ಈ ಸರಪಳಿ ಮುರಿಯಲು ಅನಿವಾರ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಬೆಡ್‌ಗಳ ಸಮಸ್ಯೆ ಇಲ್ಲ. ಜಿಲ್ಲಾಧಿಕಾರಿಗಳು ಸ್ವತಃ ಖಾಸಗಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿ, ಕೋವಿಡ್ ರೋಗಿಗಳಿಗೆ ಕಾಯ್ದಿರಿಸಬೇಕಾದ ಬೆಡ್‌ಗಳ ಸಂಖ್ಯೆ ನಿರ್ಧರಿಸುವರು. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು.
ಖಾಸಗಿ ಆಸ್ಪತ್ರೆಯಲ್ಲಿ ಹಿಂದೆ ಇದ್ದಂತ ಭೀತಿ ವಾತಾವರಣ ಇಲ್ಲ. ಕೋವಿಡ್ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಸಹಕಾರ ನೀಡುತ್ತಿವೆ. ಕೋವಿಡ್ ಚಿಕಿತ್ಸೆಗೆ ಈ ಹಿಂದೆ ಸರ್ಕಾರ ನಿಗದಿಪಡಿಸಿದ್ದ ದರವನ್ನೇ ಮುಂದುವರಿಸಲಾಗುವುದು ಎಂದರು.
ಡಯಾಲಿಸಿಸ್, ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್ ಘಟಕ ಹಸ್ತಾಂತರ
ರೋಟರಿ ಕ್ಲಬ್ ವತಿಯಿಂದ 40 ಲಕ್ಷ ವೆಚ್ಚದಲ್ಲಿ, ಕಿಮ್ಸ್ ನಲ್ಲಿ ಅಳವಡಿಸಲಾಗಿರುವ ನೂತನ ಡಯಾಲಿಸಿಸ್ ಹಾಗೂ ಕಿಡ್ನಿ ಟ್ರಾನ್ಸ್ ಪ್ಲ್ಯಾಂಟ್ ಸೆಂಟರ್ ಘಟಕದ ಒಡಂಬಡಿಕೆ ಪತ್ರವನ್ನು ರೋಟರಿ ಕ್ಲಬ್ ಅಧ್ಯಕ್ಷ ಸುರೇಂದ್ರ ಪೂರ್ವಾಲ್ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಅವರಿಗೆ ಹಸ್ತಾಂತರಿಸಿದರು.
ಬಳಿಕ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕಿಮ್ಸ್ ಬಹಳಷ್ಟು ಸುಧಾರಣೆಯಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಹೆಸರು ಗಳಿಸುತ್ತಿದೆ. ವೈದ್ಯಕೀಯ, ನರ್ಸಿಂಗ್ ಸೇರಿ ಎಲ್ಲಾ ಸಿಬ್ಬಂದಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
ರೋಟರಿ ಕ್ಲಬ್ ವತಿಯಿಂದ 40 ಲಕ್ಷ ವೆಚ್ಚದ ಉಪಕರಣಗಳನ್ನು ನೆಫ್ರಾಲಜಿ ವಿಭಾಗಕ್ಕೆ ನೀಡಿದ್ದಾರೆ. ಶೀಘ್ರವಾಗಿ ಕಿಮ್ಸ್ ಕಿಡ್ನಿ ಟ್ರಾನ್ಸ್ಫಾರಮೇಷನ್ಗೆ ಅನುಮತಿ ದೊರಕೊಸಿ ಕೊಡಲಾಗುವುದು ಎಂದರು.