ಹುಬ್ಬಳ್ಳಿ: ಲಾಕ್ಡೌನ್ ಅವಧಿಯಲ್ಲಿ ವ್ಯಾಪಾರ, ವಹಿವಾಟು ಇಲ್ಲದೆ ಕಂಗಾಲಾಗಿದ್ದ ಇಲ್ಲಿನ ಜವಳಿ ಉದ್ಯಮಿಗಳ ಮೊಗದಲ್ಲಿ ದೀಪಾವಳಿ ಮಂದಹಾಸ ತಂದಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಜವಳಿ ಹಾಗೂ ಬಟ್ಟೆ ಅಂಗಡಿಗಳನ್ನು ಹೊಂದಿರುವ ವಾಣಿಜ್ಯ ನಗರಿ ಹುಬ್ಬಳ್ಳಿ. ಲಾಕ್ಡೌನ್ನಿಂದ ಇಲ್ಲಿನ ಉದ್ಯಮಿಗಳು ಸಾಕಷ್ಟು ನಷ್ಟ ಅನುಭವಿಸಿದ್ದರು. ಅನ್ಲಾಕ್ ನಂತರ ಜನಜೀವನ ಯಥಾಸ್ಥಿತಿಗೆ ಮರಳಿದೆ.
ಜವಳಿ ಉದ್ಯಮಿಗಳು ಹೊಸ ಹೊಸ ತಂತ್ರಜ್ಞಾನ ಬಳಸಿ, ಸಾಮಾಜಿಕ ಜಾಲತಾಣ ಹಾಗೂ ಆನ್ಲೈನ್ ಜಾಹೀರಾತುಗಳ ಮೂಲಕ ಆಫರ್ ನೀಡುವ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ಸದ್ಯ ಮದುವೆ ಸೇರಿದಂತೆ ಶುಭ-ಸಮಾರಂಭಗಳು, ಹಬ್ಬ-ಹರಿದಿನಗಳು ಪ್ರಾರಂಭವಾದ ಕಾರಣ ಬಟ್ಟೆಗಳಿಗೆ ಬೇಡಿಕೆ ಹೆಚ್ಚಿದೆ. ಖರೀದಿಯ ಭರಾಟೆ ಜೋರಾಗಿದ್ದು, ಮತ್ತೆ ವ್ಯಾಪಾರ, ವಹಿವಾಟು ಯಥಾಸ್ಥಿತಿಗೆ ಮರಳುತ್ತಿರುವುದು ಶುಭ ಸೂಚನೆಯಾಗಿದೆ.