ಹುಬ್ಬಳ್ಳಿ: ಜಿಲ್ಲೆಯಲ್ಲಿ ಪ್ರತಿನಿತ್ಯ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ 200ರ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆ ತರಲು ಆ್ಯಂಬುಲೆನ್ಸ್ ಕೊರತೆಗಳು ಕಂಡು ಬಂದಿರುವುದರಿಂದ ಜಿಲ್ಲೆಯ ಜನರಿಗೆ ಮತ್ತಷ್ಟು ಆತಂಕ ಮೂಡಿದೆ.
ತಕ್ಷಣ ಕೊರೊನಾ ಸೋಂಕಿತರನ್ನು ಕರೆತರಲು ಈಗ ಜಿಲ್ಲಾಡಳಿತ 7 ಖಾಸಗಿ ಆ್ಯಂಬುಲೆನ್ಸ್ಗಳನ್ನು ಬಾಡಿಗೆ ಪಡೆದಿದೆ. ಅಷ್ಟೇ ಅಲ್ಲ, ಸೋಂಕಿನಿಂದ ಗುಣಮುಖರಾದವರನ್ನು ಮನೆಗೆ ತಲುಪಿಸಲು ಶಾಲಾ ವಾಹನಗಳು ಹಾಗೂ ಖಾಸಗಿ ಟ್ಯಾಕ್ಸಿಗಳನ್ನು ಬಾಡಿಗೆ ಪಡೆದಿದೆ. ಮತ್ತೆ 7 ಹೊಸ ಆ್ಯಂಬುಲೆನ್ಸ್ ಖರೀದಿಗೆ ಜಿಲ್ಲಾಡಳಿತ ಮುಂದಾಗಿದ್ರೂ ಸಹ ಜನರು ಮಾತ್ರ ಕಾಯುವುದು ತಪ್ಪುತ್ತಿಲ್ಲ.
ಧಾರವಾಡ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ತಕ್ಷಣವೇ ಸೋಂಕಿತರನ್ನು ಕರೆ ತರಲು ಸಾಧ್ಯವಾಗುತ್ತಿಲ್ಲ. ಇದರಿಂದ ಸೋಂಕಿತರು ಸಾಕಷ್ಟು ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 86 ಆ್ಯಂಬುಲೆನ್ಸ್ಗಳಿದ್ದು, 22 ತುರ್ತು ಸೇವೆಯ 108 ಆ್ಯಂಬುಲೆನ್ಸ್ ಮತ್ತು 20 ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಹಾಗೂ 44 ಖಾಸಗಿ ಆ್ಯಂಬುಲೆನ್ಸ್ಗಳಿವೆ. ಕೋವಿಡ್ ಸೋಂಕಿತರನ್ನು ಕರೆ ತರುವುದಕ್ಕೆ ಹೊರತುಪಡಿಸಿ ಇನ್ನುಳಿದ ರೋಗಿಗಳನ್ನು ಕರೆ ತರುವುದಕ್ಕೆ 108 ಆ್ಯಂಬುಲೆನ್ಸ್ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
ಕೋವಿಡ್ ಸೋಂಕಿತರನ್ನು ಕರೆ ತರಲು ಹೆಚ್ಚಿನ ಆ್ಯಂಬುಲೆನ್ಸ್ ಬಳಕೆ ಮಾಡಿದ್ರೆ ಇನ್ನುಳಿದ ರೋಗಿಗಳು ಆಸ್ಪತ್ರೆಗೆ ಬರಲು ಪರದಾಡಬೇಕಾಗುತ್ತದೆ. ಇದರಿಂದ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಕೊರತೆ ಸರಿಪಡಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.