ಹುಬ್ಬಳ್ಳಿ: ಕೊರೊನಾ ಭೀತಿಯಿಂದ ಲಾಕ್‌ಡೌನ್ ಘೋಷಣೆಯಾಗಿದ್ದು, ಎಲ್ಲ ಅಂಗಡಿಗಳು ಬಂದ್ ಆಗಿವೆ. ಇದರ ಬಿಸಿ ಸವಿತಾ ಸಮಾಜಕ್ಕೂ ತಟ್ಟಿದೆ. ಸಲೂನ್ಗಳು ಬಾಗಿಲು ಹಾಕಿದ್ದರಿಂದ ಜನರು ಕ್ಷೌರ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ಅಲ್ಲದೆ, ಕ್ಷೌರಿಕರ ಮನೆಗೆ ತೆರಳಿ ಕ್ಷೌರ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.
ಹೌದು, ನಗರದಲ್ಲಿ ಈ ಪ್ರಸಂಗ ನಡೆದಿದ್ದು, ಕೊರೊನಾ ಭಯದಿಂದ ಕ್ಷೌರಿಕರು ಕ್ಷೌರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಜೀವನಕ್ಕೆ ಆಧಾರವಾಗಿರುವ ಕೆಲಸವಿಲ್ಲದೆ ಅವರು ಜೀವನ ನಡೆಸುವುದು ಕಷ್ಟವಾಗಿದೆ. ಜನರು ತಮ್ಮ ಮನೆಗಳಿಗೇ ಕ್ಷೌರಕ್ಕಾಗಿ ಬರುತ್ತಿದ್ದಾರೆ. ಇನ್ನೂ ಕೆಲವರು ಮನೆಗೆ ಬಂದು ಕ್ಷೌರ ಮಾಡುವಂತೆ ಫೋನ್ ಮಾಡಿ ಕರೆಯುತ್ತಿದ್ದಾರೆ. ಆದ್ರೆ ಕೊರೊನಾ ಭೀತಿಯಿಂದ ಕ್ಷೌರಿಕರಿಗೂ ಇದು ಸಮಸ್ಯೆಯಾಗಿ ಮಾರ್ಪಟ್ಟಿದೆ.
ಈ ಹಿಂದೆ ಕ್ಷೌರಿಕರು ಪೆಟ್ಟಿಗೆ ಹಿಡಿದು ಮನೆಮನೆಗೆ ತೆರಳಿ ಕ್ಷೌರ ಮಾಡುತ್ತಿದ್ದರು. ಈಗ ಕೊರೊನಾದಿಂದ ಹಳೆಯ ದಿನಗಳು ಮರುಕಳಿಸಿವೆ. ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಕ್ಷೌರಿಕರು ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಬಿಸಿನೀರು ಹಾಗೂ ಸೋಪಿನಿಂದ ಸಾಮಗ್ರಿಗಳನ್ನು ಶುಚಿಗೊಳಿಸಿ ಕ್ಷೌರ ಮಾಡುತ್ತಿದ್ದಾರೆ. ಸಾವಿರಾರು ಕ್ಷೌರಿಕರು ದಿನನಿತ್ಯ 400 - 500 ರೂ. ದುಡಿದು ಜೀವನ ನಡೆಸುತ್ತಿದ್ರು. ಆದರೆ ಈಗಿನ ಪರಿಸ್ಥಿತಿ ತೀರ ಹದಗೆಟ್ಟಿದೆ. ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಕ್ಷೌರಿಕರು ಈಟಿವಿ ಭಾರತ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಸರ್ಕಾರ ತಮಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.