ಹುಬ್ಬಳ್ಳಿ: ಗೌನ್ ಧರಿಸುವುದು ಬ್ರಿಟಿಷ್ ಪದ್ಧತಿ. ಹಾಗಾಗಿ ನಾನು ಅದನ್ನು ಧರಿಸುವುದಿಲ್ಲ ಎಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹೇಳಿದ್ದಾರೆ.
ಮೇಯರ್ ಮಹಾನಗರ ಪಾಲಿಕೆ ಸಭೆಯಲ್ಲಿ ಹಾಗೂ ರಾಷ್ಟ್ರಪತಿಗಳ ಸ್ವಾಗತಕ್ಕೆ ಗೌನ್ ಧರಿಸದಿರುವುದಕ್ಕೆ ವಿರೋಧ ಪಕ್ಷಗಳ ಸದಸ್ಯರು ಮಹಾನಗರ ಪಾಲಿಕೆ ಸಭೆಯಲ್ಲಿ ಗದ್ದಲ ಎಬ್ಬಿಸಿದ್ದರು. ಮೇಯರ್ ಗೌನ್ ಧರಿಸುವವರೆಗೂ ಸಭೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆಗ ಮೇಯರ್ ಸಭೆಯನ್ನು ಅನಿರ್ಧಿಷ್ಟಾವಧಿಯವರೆಗೆ ಮುಂದೂಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸರ್ಕಾರದ ಆದೇಶ ಬರುವವರೆಗೂ ಗೌನ್ ಧರಿಸುವುದಿಲ್ಲ. ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆದಿದ್ದೇನೆ. ಸರ್ಕಾರದ ಆದೇಶ ಬಂದ್ರೆ ಗೌನ್ ಧರಿಸುತ್ತೇನೆ. ಈಗಾಗಲೇ ಹಲವು ಮಹಾನಗರ ಪಾಲಿಕೆ ಮೇಯರ್ ಗೌನ್ ಪದ್ಧತಿ ಬಿಟ್ಟಿದ್ದಾರೆ. ರಾಷ್ಟ್ರಪತಿಗಳು ಬಂದಾಗಲೂ ಸಹ ನಾನು ಗೌನ್ ಹಾಕಿಲ್ಲ. ಸಭೆಯಲ್ಲಿಯೂ ಗೌನ್ ಹಾಕಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗೌನ್ ಗದ್ದಲ: ಅನಿಷ್ಟಾವಧಿವರೆಗೆ ಸಭೆ ಮುಂದೂಡಿಕೆ
ಗೌನ್ ಧರಿಸಬೇಕು ಎಂದು ಎಲ್ಲಿಯೂ ಕಾನುನೂ ಇಲ್ಲ. ಈ ವಿಚಾರದ ಬಗ್ಗೆ ಸದಸ್ಯರಿಗೆ ಚರ್ಚೆಗೆ ಅವಕಾಶ ಕೊಡುತ್ತೇನೆ. ಕಾಂಗ್ರೆಸ್ ಸದಸ್ಯರ ಚರ್ಚೆಗೆ ಎರಡು ಮೂರು ಬಾರಿ ಕರೆದ್ರು ಬಂದಿಲ್ಲ. ಬ್ರಿಟಿಷ್ ಪದ್ಧತಿಗೆ ನಾನು ವಿರೋಧ ಮಾಡ್ತಿನಿ ಎಂದು ಹೇಳಿದರು.