ಹುಬ್ಬಳ್ಳಿ : ರೈತರ ಮನವಿಯಂತೆ ಬೆಂಬಲ ನೀಡಿ ಕಡಲೆ ಬೆಳೆಯನ್ನು ಕೊಂಡಿರುವ ರಾಜ್ಯ ಸರ್ಕಾರ ಹಣವನ್ನು ನೀಡದೆ ಸತಾಯಿಸುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸುರಿದ ಮಳೆಯಿಂದಾಗಿ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಅಳಿದುಳಿದ ಬೆಳೆಯನ್ನ ಉಳಿಸಿಕೊಂಡಿದ್ದ ರೈತರಿಗೆ ಲಾಕ್‌ಡೌನ್ ಬರಸಿಡಿಲಾಗಿ ಬಡಿದಿತ್ತು. ಆದರೆ, ಈಗ ಕಡಲೆ ಖರೀದಿ ಮಾಡಿದ ಸರ್ಕಾರ ರೈತರಿಗೆ ಹಣ ಪಾವತಿಸದೆ ಗಾಯದ ಮೇಲೆ ಬರೆ ಎಳೆದಿದೆ.
ಕಡಲೆ ಬೆಳೆಯನ್ನ ಬೆಂಬಲ ಬೆಲೆ ಕೊಟ್ಟು ಸರಕಾರ ಖರೀದಿಸುವಂತೆ ರೈತರು ಒತ್ತಾಯ ಮಾಡಿದ್ರು. ರೈತರ ಮನವಿಗೆ ಮಣಿದ ರಾಜ್ಯ ಸರಕಾರ ಪ್ರತಿ ಕ್ವಿಂಟಾಲಗ 4875 ರೂಪಾಯಿ ಬೆಂಬಲ ಬೆಲೆ ಕೊಟ್ಟು ಕಡಲೆ ಖರೀದಿ ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ 13 ಕಡಲೆ ಖರೀದಿ ಕೇಂದ್ರಗಳನ್ನ ತೆರೆದು ಕಡಲೆ ಖರೀದಿ ಮಾಡಲಾಗಿದೆ. ಕಡಲೆ ಖರೀದಿ ಮಾಡಿ ಎರಡು ತಿಂಗಳು ಕಳೆಯುತ್ತಾ ಬಂತು ಆದರೆ ಇದುವರೆಗು ರೈತರಿಗೆ ಹಣ ಸಿಕ್ಕಿಲ್ಲ.
ಧಾರವಾಡ ಜಿಲ್ಲೆಯ 13 ಕಡಲೆ ಖರೀದಿ ಕೇಂದ್ರಗಳಲ್ಲಿ 21,235 ರೈತರು ಕಡಲೆ ನೀಡಿದ್ದಾರೆ. 2 ಲಕ್ಷ 9 ಸಾವಿರ ಕ್ವಿಂಟಾಲ್ ಧಾರವಾಡ ಜಿಲ್ಲೆಯಲ್ಲಿ ಖರೀದಿ ಮಾಡಲಾಗಿದೆ. ಅಂದಾಜು 74 ಕೋಟಿ ರೂಪಾಯಿ ರೈತರಿಗೆ ಹಣ ಪಾವತಿಯಾಗಬೇಕು. ಆದ್ರೆ ಇದರುವರೆಗು ನಯಾಪೈಸೆ ರೈತರಿಗೆ ಪಾವತಿಯಾಗಿಲ್ಲ.
ಇನ್ನು ರಾಜ್ಯದ ಹಲವು ಜಿಲ್ಲೆಗಳಿಂದ 114242 ರೈತರು ಕಡಲೆ ನೀಡಿದ್ದಾರೆ. 1018413 ಕ್ವಿಂಟಾಲ್ ಕಡಲೆಯನ್ನ ರಾಜ್ಯದಲ್ಲಿ ಖರೀದಿ ಮಾಡಲಾಗಿದೆ. ಆದ್ರೆ ಇದುವರೆಗು ರೈತರಿಗೆ ಹಣ ಪಾವತಿಯಾಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಆದಷ್ಟು ಬೇಗ ರೈತರಿಗೆ ಹಣ ಪಾವತಿಸಬೇಕೆಂದು ಮನವಿ ಮಾಡಲಾಗಿದೆ.